ಮಳವಳ್ಳಿಯ ಹಳ್ಳಿಹೈದ ಗಿಲ್ಲಿ ಇದೀಗ ದೊಡ್ಮನೆ ದೊರೆಯಾಗಿ ಹೊರಹೊಮ್ಮಿದ್ದಾರೆ. ಇಡೀ ರಾಜ್ಯವೇ ಮೆಚ್ಚುವ ಮನೆಮಗನಾಗಿ ಮಿಂಚಿದ್ದಾರೆ. ಎಲ್ಲೆಲ್ಲೂ ಗಿಲ್ಲಿ, ಗಿಲ್ಲಿ ಸೌಂಡ್ ಕೇಳಿ ಬರ್ತಿದೆ. ಗಿಲ್ಲಿಗೆ ಗೆಲುವಿಗೆ ಇಡೀ ಕರುನಾಡೇ ಸಂಭ್ರಮದಲ್ಲಿದೆ.
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ತಮ್ಮ ಗೆಲುವು ಮತ್ತು ಮುಂದಿನ ನಡೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತುಂಬಾ ಖುಷಿ ಆಯ್ತು ನನಗೆ. ನಂಬೋಕೆ ಆಗ್ತಿಲ್ಲ. ಹೊರಗಡೆ ಬಂದ್ಮೇಲೆ ಇದೆಲ್ಲ ನಿಜನಾ ಅನ್ನಿಸ್ತಿದೆ. ಬಂದಿರೋ 50 ಲಕ್ಷದಲ್ಲಿ ಯಾವುದಾದ್ರೂ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನನಗೆ ಈಗಲೂ ನಂಬೋದಕ್ಕೆ ಆಗ್ತಿಲ್ಲ. ಇದು ನಿಜನಾ, ಸುಳ್ಳಾ ಅಂತ ಗೊತ್ತಾಗ್ತಿಲ್ಲ. ಪದೇ ಪದೇ ಮೈಕ್ ಇದ್ಯಾ ಅಂತ ನೋಡಿಕೊಳ್ತಿದ್ದೀನಿ. ನಾನ್ ದೊಡ್ಡಮ್ಮ.. ದೊಡ್ಡಮ್ಮ ದ್ವಾಸೆ ಕೊಡು.. ಹಾಡನ್ನ ಸ್ಕೂಲ್‌ಗೆ ಹೋಗುವಾಗ ಕಲಿತಿದ್ದು, ಅದು ಹಾಗೆ ಮನೇಲಿ ಹೇಳಿದ್ದು. ಆಮೇಲೆ ಇಷ್ಟು ಫೇಮಸ್ ಆಯ್ತು ಆ ಹಾಡು. ಮಕ್ಕಳಿಗೆಲ್ಲ ಇಷ್ಟ ಆಗಿದೆ ಅನ್ನೋದು ಆಚೆ ಬಂದ್ಮೇಲೆ ಗೊತ್ತಾಯ್ತು ಎಂದು ಖುಷಿ ವ್ಯಕ್ತಪಡಿಸಿದರು.
ಕಾವ್ಯ ಜೊತೆ ಮದುವೆ ಎಲ್ಲ ಏನೂ ಇಲ್ಲ. ಎಂಟ್ರಿ ಕೊಡುವಾಗ ಜಂಟಿಯಾಗಿ ನಾನು ಮತ್ತು ಕಾವ್ಯ ಹೋಗಿದ್ವಿ. ಆವಾಗ ಸುಮ್ನೆ ಹೇಳಿದ್ದು, ಅದೇ ಸಿಂಕ್ ಆಗೋಯ್ತು. ನಾವು 6 ಜನ ಫೈನಲಿಸ್ಟ್ ಇದ್ವಲ್ಲ. ನಮಗೆ ಎಷ್ಟು ಟೆನ್ಷನ್ ಆಗ್ತಿತ್ತು. ಟಾಪ್ 6ನಲ್ಲಿ ಇರೋರಲ್ಲಿ ಯಾರಾದರು ಒಬ್ಬರು ನನ್ನ ಪಕ್ಕ ನಿಲ್ತಾರೆ ಅಂತ ಮನಸ್ಸಿಗೆ ಅನ್ನಿಸಿತ್ತು. ಆದರೆ, ಊಹೆ ಮಾಡೋಕು ಆಗ್ತಿರಲಿಲ್ಲ ಏನಾಗುತ್ತೆ ಅಂತ ಎಂದು ಗೆಲುವಿನ ಕ್ಷಣವನ್ನು ನೆನೆದರು.
ಚಡ್ಡಿ, ಬನಿಯನ್ನೇ ನಂಗಿಷ್ಟ. ಬಿಗ್ ಬಾಸ್ ಮನೆಗೆ ಹೋದಾಗ ನಾನು ಶರ್ಟು-ಪ್ಯಾಂಟು ಹಾಕೊಂಡು ಕುತ್ಕೊಳ್ತಿದ್ದೆ. ಯಾಕೋ ಕಷ್ಟ ಅನ್ಸೋದು. ಆಮೇಲೆ ಆಗಲ್ಲ ಇದು ಅಂತ ಬಿಟ್ಬಿಟ್ಟೆ ಎಂದು ದೊಡ್ಮನೆಯಲ್ಲಿ ಚಡ್ಡಿ-ಬನಿಯನ್ ಹಾಕ್ತಿದ್ದ ಬಗ್ಗೆ ಗಿಲ್ಲಿ ಕ್ಲ್ಯಾರಿಟಿ ಕೊಟ್ಟರು.
ಡೆವಿಲ್ ಸಿನಿಮಾದಲ್ಲಿ ನನ್ನ ನೋಡಿ ಜನ ಇಷ್ಟ ಪಟ್ರಂತೆ ಖುಷಿ ಆಯ್ತು. ರಿಲೀಸ್ ಆಯ್ತು ಅಂತಾನೂ ಗೊತ್ತಾಗಿಲ್ಲ. ಚೈತ್ರಾ ಬಂದಿದ್ರಲ್ಲ ಅವರು, ನಿನ್ನ ನೋಡ್ದೆ ಕಣೋ ಸಿನಿಮಾದಲ್ಲಿ ಅಂದ್ರು. ಯಾವ್ ಸಿನಿಮಾ ಅನ್ಕೊಂತಿದ್ದೆ. ದರ್ಶನ್ ಸರ್ ಸಿನಿಮಾ. ದರ್ಶನ್ ಅಣ್ಣನ ಜೊತೆ ಮೊದಲ ಸಿನಿಮಾ ಮಾಡಿದ್ದು ಖುಷಿ ಆಯ್ತು. ಮುಂದೆ ಹೀಗೇ ಸಿನಿಮಾ ಮಾಡ್ಕೊಂಡು ಹೋಗ್ತೀನಿ ಎಂದು ತಿಳಿಸಿದರು.
ಬಿಗ್‌ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾದಾಗಿನಿಂದಲೂ ವಿನ್ನರ್ ಆಗೋದು ಗಿಲ್ಲಿ ನಟ ಎಂಬ ಮಾತು ಕೇಳಿಬರುತ್ತಲೇ ಇತ್ತು. ಗಲ್ಲಿ ಗಲ್ಲಿಯಲ್ಲಿಯೂ ಗಿಲ್ಲಿ ನಟನ ಹವಾ ಜೋರಾಗಿತ್ತು. ಅದರಂತೆ ಇದೀಗ ಗಿಲ್ಲಿ ಗೆದ್ದಿದ್ದಾರೆ. ಆ ಮೂಲಕ ವ್ಯಕ್ತಿತ್ವದ ಆಟದಲ್ಲಿ ಗೆಲ್ಲೋದು ಹೀರೋನೇ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಶುರುವಿನಿಂದಲೂ ಒನ್ ಸೈಡೆಡ್ ಆಗಿದ್ದ ಬಿಗ್‌ಬಾಸ್‌ನಲ್ಲಿ ಗಿಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗಿಲ್ಲಿ ನಟನ ಕಾಮಿಡಿ ಟೈಮಿಂಗ್, ಸಂದರ್ಭೋಚಿತ ಕಾಮಿಡಿ, ಪಂಚಿಂಗ್ ಲೈನ್ಸ್ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ತಮ್ಮ ಕಾಮಿಡಿಯಲ್ಲಿ ಸಿಲ್ಲಿ ಜೋಕ್ಸ್ನ ಗಿಲ್ಲಿ ಎಂದೂ ಮಿಕ್ಸ್ ಮಾಡಲಿಲ್ಲ. ಡಬಲ್ ಮೀನಿಂಗ್ ಅಥವಾ ಅಶ್ಲೀಲತೆಯನ್ನ ಸೋಕಿಸಲೂ ಇಲ್ಲ. ಇಡೀ ಫ್ಯಾಮಿಲಿ ಕೂತು. ಎಲ್ಲರೂ ಹೊಟ್ಟೆ ತುಂಬಾ ನಗುವಂತೆ ಮಾಡಿದವರು ಗಿಲ್ಲಿ ನಟ. ಇದೇ ಕಾರಣಕ್ಕೆ `ಗಿಲ್ಲಿ ಗೆಲ್ಲಬೇಕು’ ಅಂತ ಬಹುತೇಕರು ಬಯಸಿದ್ದರು. ವೀಕ್ಷಕರು ಅಂದುಕೊಂಡಂತೆ ಗಿಲ್ಲಿ ನಟ ವಿಜಯಪತಾಕೆ ಹಾರಿಸಿದ್ದಾರೆ. ನಿರೀಕ್ಷೆಯಂತೆ ಗಿಲ್ಲಿ ಬಿಗ್‌ಬಾಸ್ ವಿನ್ನರ್ ಆಗ್ತಿದ್ದಂತೆ ಇಡೀ ಕರುನಾಡೇ ಸಂಭ್ರಮಿಸಿದೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಶಿಳ್ಳೆ, ಚಪ್ಪಾಳೆ, ಕುಣಿದು, ಕುಪ್ಪಳಿಸಿ ಸಂಭ್ರಮಿಸಿದ್ದಾರೆ.
