ಮೂಡಿಗೆರೆ: ರಾಜಕೀಯದ ಗಂಧವೇ ಗೊತ್ತಿಲ್ಲದ ನಯನಾ ಮೋಟಮ್ಮರನ್ನ ಗೆಲ್ಲಿಸಿ ತಪ್ಪು ಮಾಡಿದ್ರಾ ಮೂಡಿಗೆರೆ ಕಾಂಗ್ರೆಸ್ಸಿನವರು. ತಾಯಿ ಮೋಟಮ್ಮನವರ ರಾಜಕೀಯ ನಡೆಯನ್ನ ನೋಡಿದ್ರು.. ತಾಯಿಯಂತೆ ಮಗಳು ನಡೆದುಕೊಳ್ತಾರೆ ಅಂದ್ಕೊಂಡು ಕ್ಷೇತ್ರದ ಬಗ್ಗೆ ‘ಏನೂ ಗೊತ್ತಿಲ್ಲದ’ ನಯನಾ ಮೋಟಮ್ಮರನ್ನ ಪಕ್ಷದ ದೃಷ್ಠಿಯಿಂದ ‘ಕೈ’ ಹಿಡಿದ್ರು. ಆದ್ರೆ ಇದೀಗ ಯಾಕಪ್ಪ ಗೆಲ್ಲಿಸಿದ್ವಿ ಅಂತಾ ಪಶ್ಚಾತಾಪ ಅನುಭವಿಸ್ತಾ ಇದ್ದಾರೆ, ಮೂಡಿಗೆರೆಯ ಕಾಂಗ್ರೆಸ್ ನಾಯಕರು. ಯೆಸ್, ಇದನ್ನ ನಾವು ಹೇಳ್ತಾ ಇಲ್ಲ, ಬದಲಾಗಿ ಪಕ್ಷಕ್ಕಾಗಿ ಹಲವು ದಶಕಗಳಿಂದ ಬೆವರು ಸುರಿಸಿ ದುಡಿಯುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ ಹೇಳ್ತಿದ್ದಾರೆ. ನಾವು ತಪ್ಪು ಮಾಡಿಬಿಟ್ವಿ, ಚುನಾವಣೆಯಲ್ಲಿ ‘ನಿಲ್ಲಲು’ ಅವಕಾಶವನ್ನೇ ಕೊಡಬಾರದಿತ್ತು. ಜನಸಾಮಾನ್ಯರನ್ನ ಕಥೆ ಬಿಡಿ, ಈಯಮ್ಮಾ, ನಮ್ಮನ್ನೇ ಧಿಕ್ಕರಿಸಿ ನಡೆದುಕೊಳ್ತಿದ್ದಾರೆ ಅಂತಾ ಬೇಸರವನ್ನ ತೋಡಿಕೊಂಡಿದ್ದಾರೆ. ಇಲ್ಲಿವರೆಗೂ ‘ತಡ್ಕೊಂಡು’ ತೆರೆಮರೆಯಲ್ಲೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ನಾಯಕರು, ಇಂದು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ನೀನೇ ಸಾಕಿದ ಗಿಣಿ. ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ.. ನಿನ್ನ ಹದ್ದಾಗಿ ಕುಕ್ಕಿತಲ್ಲೋ.. ! ಈ ಹಾಡು ಮೂಡಿಗೆರೆ ಕ್ಷೇತ್ರದ ಕೈ ನಾಯಕರ ಕಿವಿಯಲ್ಲಿ ಸದ್ಯ ರಿಂಗಣಿಸುತ್ತಿದೆ. ಯೆಸ್, 20 ವರ್ಷಗಳ ನಂತರ ಮೂಡಿಗೆರೆ ಕ್ಷೇತ್ರ ‘ಕೈ’ ಪಾಲಾಗಿದೆ. ಇದರ ಹಿಂದೆ ಕೈ ನಾಯಕರ ಅಪಾರ ಕೊಡುಗೆ ಇದೆ.! ಅನೇಕ ವರ್ಷಗಳ ನಿರಂತರ ಹೋರಾಟ ಇದೆ.! ‘ನಯನಾ’ ಅನ್ನೋ ಅಪರಿಚಿತ ಮುಖ ಕ್ಷೇತ್ರಕ್ಕೆ ಹೊಸದಾಗಿತ್ತು.! ಮತದಾರರು ನೋಡಿದ್ದು ನಯನಾ ಜೊತೆಗಿದ್ದ ಪರಿಚಿತ ಮುಖಗಳನ್ನ.!
ಯಾಕಂದ್ರೆ ನಯನಾ ಮೋಟಮ್ಮ, ಜನರಿಗೆ ಪರಿಚಯವಾಗಿದ್ದು ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಆರೇಳು ತಿಂಗಳ ಮುಂಚೆಯಷ್ಟೇ.! ಅಲ್ಲಿಯವರೆಗೂ ನಯನಾ ಮೋಟಮ್ಮ, ಮೂಡಿಗೆರೆ ಕ್ಷೇತ್ರದಲ್ಲಿ ಕಾಣಿಸಿಕೊಂಡವರಲ್ಲ, ಜನಸಾಮಾನ್ಯರ ಜೊತೆ ಇದ್ದವರಲ್ಲ, ಜನರ ಕಷ್ಟಸುಖದಲ್ಲಿ ಭಾಗಿಯಾಗಿದ್ದವರಲ್ಲ..! ಆ ಎಲ್ಲಾ ಕೆಲಸವನ್ನ ‘ಕೈ’ ಪಕ್ಷದ ಹಿರಿಯ ಮುಖಂಡರು ಮಾಡಿಕೊಂಡು ಬರ್ತಿದ್ರು. ಆದ್ರೆ ಯಾವಾಗ ಚುನಾವಣೆ ಅನೌನ್ಸ್ ಆಗಲು ದಿನಗಣನೆ ಆರಂಭವಾಯ್ತೋ, ಆಗ ನಯನಾ ಟಿಕೆಟ್ ಗೋಸ್ಕರ ಓಡಾಟ ಶುರು ಹಚ್ಕೊಂಡ್ರು. ಕೊನೆಕ್ಷಣದವರೆಗೂ ಟಿಕೆಟ್ ಕೊಡಲು ಕಾಂಗ್ರೆಸ್ ರಾಜ್ಯ ನಾಯಕರಿಗೆ ಮನಸ್ಸಿರಲಿಲ್ಲ, ಆದ್ರೆ ಮಾಜಿ ಸಚಿವೆ ಮೋಟಮ್ಮನವರ ಮುಖ ನೋಡಿ, ಕೊನೆಗೆ ಅಳೆದು ತೂಗಿ ಟಿಕೆಟ್ ನಯನಾ ಪಾಲಾಯ್ತು. ಆಗಲೂ ಕಾಂಗ್ರೆಸ್ ನ ಅದೆಷ್ಟೋ ನಾಯಕರು, ನಯನಾರ ವಿರುದ್ಧ ಇದ್ರು.. ಪ್ರತ್ಯೇಕ ಸಭೆ ಮಾಡಿದ್ರು.. ಕೊನೆಗೆ ಪಕ್ಷದ ಮುಖ ನೋಡಿ ಮನಸ್ಸಿಲ್ಲದ ಮನಸ್ಸಲ್ಲಿ ನಯನಾರನ್ನ ಗೆಲ್ಲಿಸಲು ಮುಂದಾದ್ರು.. ಅಂತೂ ಇಂತೂ 20 ವರ್ಷದ ಬಳಿಕ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸನ್ನ ಗೆಲ್ಲಿಸಿಯೇ ಬಿಟ್ರು.! ಹೀಗೆ ನಯನಾರನ್ನ ಗೆಲ್ಲಿಸಲು ಪಣತೊಟ್ಟಿದ್ದು, ಆ ವೇಳೆ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜಿ ಸುರೇಂದ್ರ ಆಂಡ್ ಟೀಂ…. ವಿಪರ್ಯಾಸ ಅಂದ್ರೆ ಮಾನ್ಯ ಶಾಸಕಿ ನಯನಾ ಮೋಟಮ್ಮ ಅವರು, ತಮ್ಮ ಮನೆಯಲ್ಲೇ ಸಭೆ ಕರೆದು ಇದೀಗ ಅವರನ್ನೇ ಕಿಕ್ ಔಟ್ ಮಾಡಲು ಹೊರಟಿರೋದು ಕೈ ನಾಯಕರ ಮುನಿಸಿಗೆ ಕಾರಣವಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ಬದಲಾವಣೆ ಮಾಡಲು ಸಭೆ ಮಾಡಿದ್ದೇನೆ, ಚರ್ಚಿಸಿದ್ದೇನೆ ಅಂತಾ ಹೇಳಿದ ನಯನಾ ಅವರಿಗೆ ಹಿರಿಯ ಕೈ ನಾಯಕರು, ಸರಿಯಾಗಿಯೇ ತಪರಾಕಿ ಹಾಕಿದ್ದಾರೆ. ನಿಮಗೆ ಸಭೆ ಕರೆಯೋದಕ್ಕೆ ಅಧಿಕಾರವೇ ಇಲ್ಲ, ನೀವು ಶಾಸಕಿ ಇರಬಹುದು.. ಆದರೆ ಪಕ್ಷಕ್ಕೆ ತನ್ನದ ಆದ ಕಟ್ಟುಪಾಡುಗಳಿವೆ, ಶಿಸ್ತು, ನೀತಿ ನಿಯಮಗಳು ಇದ್ದಾವೆ ಅಂತಾ ನಯನಾ ವಿರುದ್ಧ ಚಾಟಿ ಬೀಸಿದ್ದಾರೆ ಕೈ ನಾಯಕರು. ಶಾಸಕಿ ಆದ್ಮೇಲೆ ಒಂದು ದಿನವೂ ಪಕ್ಷದ ಕಚೇರಿಗೆ ಆಗಮಿಸಿಲ್ಲ, ಗೆದ್ದ ಮೇಲೆ ಗೆಲ್ಲಿಸಿದವರ ನೆನಪು ಇಲ್ಲ, ಕೃತಜ್ಞತೆಯಂತೂ ಮೊದಲೇ ಇಲ್ಲ ಅಂತಾ ಕಿಡಿಕಾರಿದ್ದಾರೆ. ಅಲ್ಲದೇ ಗ್ರಾಮ ಪಂಚಾಯ್ತಿ, ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗಳು ಆಗಮಿಸುತ್ತಾ ಇರೋ ಹಿನ್ನೆಲೆಯಲ್ಲಿ ‘ಸಮರ್ಥ’ ರಾಗಿರೋ ಜಿ ಸುರೇಂದ್ರ ಅವರನ್ನ ಬದಲಾಯಿಸೋ ಮಾತೇ ಇಲ್ಲ ಅಂತಾ ಸಭೆ ಒಕ್ಕೊರಲಿನ ನಿರ್ಣಯ ತೆಗೆದುಕೊಂಡಿದೆ. ಇಲ್ಲಿವರೆಗೆ ‘ಸುಮ್ಮನಿದ್ದಿದ್ದು’ ಸಾಕು, ಇನ್ಮೇಲೆ ‘ಬಾಯಿ ಬಿಡಲೇ ಬೇಕು’ ಅಂತಾ ‘ಸರ್ವಾಧಿಕಾರಿ ಧೋರಣೆ’ ಅನುಸರಿಸುತ್ತಿರುವ ಶಾಸಕಿ ನಯನಾ ಮೋಟಮ್ಮ ವಿರುದ್ಧ ‘ಕೆಂಡ’ಕಾರಿದ್ದಾರೆ ಕೈ ನಾಯಕರು.
ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜಿ ಸುರೇಂದ್ರ, ಮಾಜಿ ಸಚಿವ ನಿಂಗಯ್ಯ, ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ, ಮಾಜಿ ಬ್ಲಾಕ್ ಅಧ್ಯಕ್ಷರಾದ ಲಕ್ಷ್ಮಣಗೌಡ, ಎಂ.ಪಿ ಮನು, ಬಿ.ಎಸ್ ಜಯರಾಂ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ರಥ ಹಾಜಿ, ಸಿ.ಕೆ ಇಬ್ರಾಹಿಂ ಅಹಮದ್ಭಾವ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಅನಂತು, ಕಿರುಗುಂದ ರಾಮಯ್ಯ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಷಣ್ಮುಖ, ಮರಗುಂದ ಪ್ರಸನ್ನ, ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್, ಹಾಲಪ್ಪಗೌಡ, ಬಿ,ಕೆ ಉದಯ್ ಶಂಕರ್, ಅಯ್ಯೂಬ್, ವಿನಯ್ ಕುಮಾರ್ ಸೇರಿದಂತೆ ಹತ್ತಾರು ಮುಖಂಡರು, ಕಾರ್ಯಕರ್ತರು ಸೇರಿದ್ರು. ಇಷ್ಟು ಸಂಖ್ಯೆಯಲ್ಲಿ ಕೈ ನಾಯಕರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ ಅಂದ್ರೆ ಕಾಂಗ್ರೆಸ್ಸಿಗರಿಗೆ ಎಷ್ಟು ಭ್ರಮನಿರಸನ ಆಗಿರಬೇಕಲ್ವಾ..? ಇನ್ನೂ ತಳಮಟ್ಟದ ಕಾರ್ಯಕರ್ತರು, ಜನಸಮಾನ್ಯರ ಸ್ಥಿತಿ,, ನಿಜಕ್ಕೂ ದೇವರಿಗೆ ಪ್ರೀತಿ.!
ವರದಿ: ಪ್ರಶಾಂತ್ ಮೂಡಿಗೆರೆ
