ಜಮ್ಮು-ಕಾಶ್ಮೀರದಲ್ಲಿ ಹವಾಮಾನವು ತೀವ್ರವಾಗಿ ಬದಲಾಗಿದ್ದು, ಜಮ್ಮು ಭಾಗದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರಮುಖ ರಸ್ತೆಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸುಮಾರು 20ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ.
ಬೆಳಿಗ್ಗೆಯಿಂದಲೇ ಜಮ್ಮು ಪ್ರದೇಶದ ರಾಂಬನ್, ಡೋಡಾ, ಕಿಸ್ತವಾರ್, ಪೂಂಚ್, ರಜೌರಿ, ರಿಯಾಸಿ, ಉಧಂಪುರ ಮತ್ತು ಕಥುವಾ ಜಿಲ್ಲೆಗಳ ಎತ್ತರದ ಭಾಗಗಳಲ್ಲಿ ಮಧ್ಯಮದಿಂದ ಭಾರೀ ಪ್ರಮಾಣದ ಹಿಮಪಾತ ದಾಖಲಾಗಿದೆ. ಕೆಲವು ಕಡೆಗಳಲ್ಲಿ 5 ಇಂಚುಗಳಿಂದ ಒಂದು ಅಡಿಯಷ್ಟು ಹಿಮ ಬಿದ್ದಿದೆ. ವಿಶೇಷವಾಗಿ ತ್ರಿಕೂಟ ಪರ್ವತದ ಮೇಲಿರುವ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಈ ಋತುವಿನ ಮೊದಲ ಹಿಮಪಾತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜಮ್ಮು ನಗರ ಮತ್ತು ಬಯಲು ಸೀಮೆಯ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಹಿಮಪಾತದ ತೀವ್ರತೆಯಿಂದಾಗಿ 270 ಕಿ.ಮೀ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ (NH-44) ಎರಡೂ ದಿಕ್ಕುಗಳಲ್ಲಿ ಸಂಚಾರಕ್ಕೆ ಲಭ್ಯವಿಲ್ಲ. ಇದರೊಂದಿಗೆ ಮುಘಲ್ ರಸ್ತೆ, ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ ಮತ್ತು ಸಿಂಥನ್ ರಸ್ತೆಗಳನ್ನೂ ಸಹ ಮುಚ್ಚಲಾಗಿದೆ. ರಸ್ತೆಗಳು ಸಂಪೂರ್ಣವಾಗಿ ತೆರವುಗೊಳ್ಳುವವರೆಗೆ ಪ್ರಯಾಣಿಕರು ಅತ್ತ ತೆರಳದಂತೆ ಸಂಚಾರ ಇಲಾಖೆ ಸೂಚನೆ ನೀಡಿದೆ.
ಕಾಶ್ಮೀರ ಕಣಿವೆಯಲ್ಲೂ ಹಿಮಪಾತ ಮುಂದುವರಿದಿದ್ದು, ಶ್ರೀನಗರ ನಗರದಲ್ಲಿ ಈ ಹಂಗಾಮಿನ ಮೊದಲ ಹಿಮಪಾತವಾಗಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಗುಲ್ಮಾರ್ಗ್‌ನಲ್ಲಿ 2 ಅಡಿಗಿಂತ ಹೆಚ್ಚು, ಸೋನಮಾರ್ಗ್‌ನಲ್ಲಿ 6 ಇಂಚು ಹಾಗೂ ಪಹಲ್‌ಗಾಂವ್‌ನಲ್ಲಿ ಸುಮಾರು 3 ಇಂಚು ಹಿಮ ದಾಖಲಾಗಿದೆ. ಬುದಗಾಂವ್, ಬಾರಾಮೂಲಾ, ಕುಪ್ವಾರಾ, ಶೋಪಿಯಾನ್, ಪುಲ್ವಾಮಾ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲೂ ಹವಾಮಾನ ವೈಪರೀತ್ಯ ಕಂಡುಬಂದಿದೆ.
ಶ್ರೀನಗರ ವಿಮಾನ ನಿಲ್ದಾಣದ ರನ್‌ವೇ ಮೇಲೆ ಹಿಮ ಸಂಗ್ರಹವಾದ ಕಾರಣ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, 20ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ರಾಜೌರಿ, ಪೂಂಚ್ ಮತ್ತು ಕಥುವಾ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ಶುಕ್ರವಾರ ಸಂಜೆಯವರೆಗೆ ಇದೇ ರೀತಿಯ ಪ್ರತಿಕೂಲ ಹವಾಮಾನ ಇರಲಿದ್ದು, ಬಲವಾದ ಗಾಳಿ ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಮತ್ತೊಂದೆಡೆ, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಎನ್‌ಸಿಆರ್ ಪ್ರದೇಶಗಳಲ್ಲಿ ಇಂದು ಮುಂಜಾನೆಯಿಂದಲೇ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಹಿಮಾಲಯದ ಭಾಗದಲ್ಲಿ ಆಗುತ್ತಿರುವ ಭಾರೀ ಹಿಮಪಾತದ ಪರಿಣಾಮವಾಗಿ ಈ ಮಳೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಿಂದಾಗಿ ವಾಯುಮಾಲಿನ್ಯದ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ.
ಭಾರತೀಯ ಹವಾಮಾನ ಇಲಾಖೆಯು ಮುಂಜಾನೆ 4:50 ಕ್ಕೆ ಆರೆಂಜ್ ಅಲರ್ಟ್ ಘೋಷಿಸಿದ್ದು, ದೆಹಲಿಯ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ನರೇಲಾ, ಬವಾನಾ, ಅಲಿಪುರ್, ಬುರಾರಿ, ಕಂಝಾವಾಲಾ, ರೋಹಿಣಿ, ಬದ್ಲಿ, ಮಾಡೆಲ್ ಟೌನ್, ಆಜಾದ್‌ಪುರ, ಪಿತಾಂಪುರ, ಮುಂಡ್ಕಾ, ಪಶ್ಚಿಮ ವಿಹಾರ್, ಪಂಜಾಬಿ ಬಾಗ್, ರಾಜೌರಿ ಗಾರ್ಡನ್, ಜಾಫರ್‌ಪುರ್, ನಜಾಫ್‌ಗಢ್ ಮತ್ತು ದ್ವಾರಕಾ ಸೇರಿದಂತೆ ವಿವಿಧೆಡೆ ಮಿಂಚು ಹಾಗೂ ವೇಗವಾದ ಗಾಳಿಯೊಂದಿಗೆ ಮಳೆ ಮುಂದುವರಿಯುತ್ತಿದೆ.
