ಕೊಪ್ಪ: ಕೊಪ್ಪದ ಜನಾನುರಾಗಿ ಸಬ್ ಇನ್ಸ್‌ಪೆಕ್ಟರ್ ಶ್ರೀ ಬಸವರಾಜ್ ರವರಿಗೆ ವರ್ಗಾವಣೆಯಾಗಿದ್ದು ಇಂದು ಕೊಪ್ಪ ಆಟೋ ಚಾಲಕರ ಸಂಘ ಮತ್ತು ಗೂಡ್ಸ್ ಆಟೋ ಚಾಲಕರ ಸಂಘದಿಂದ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.

ಅವರಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಶೃಂಗೇರಿ ಕ್ಷೇತ್ರದ ಗೌರವ ಅಧ್ಯಕ್ಷರಾದ ಹೆಚ್ ಆರ್ ಜಗದೀಶ್ ಮಾತನಾಡಿ ಕಂಬನಿಯಲ್ಲೂ ಸಂಭ್ರಮವಿರುತ್ತದೆ. ಅರಿಯಲು ವಿಶಾಲ ಮನೋಭಾವ ಇರಬೇಕು. ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ ಗುರುತಿಸಲು ಹೃದಯವಂತಿಕೆಬೇಕು. ಮೌನದಲ್ಲೂ ಮಾತು ಇರುತ್ತದೆ, ಅರ್ಥ ಮಾಡಿಕೊಳ್ಳೋ ಎದೆಗಾರಿಕೆ ಬೇಕು.
ಬಡವರು ಮತ್ತು ನಿರ್ಗತಿಕರನ್ನು ಕಂಡರೆ ಕಣ್ಣಿರಾಗುತ್ತಿದ್ದ ಅಪರೂಪದ ಹೃದಯವಂತ ಪೊಲೀಸ್ ಇವರು, ಸಮಾಜದ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಸರಳ ಮನೋಭಾವ ಹೊಂದಿದ್ದ ಹಾಗೆಯೇ ಸಮಾಜ ಕಂಟಕರಿಗೆ ಸಿಂಹಸ್ವಪ್ನ ವಾಗಿದ್ದರು.

ನಮ್ಮ ಆಟೋಚಾಲಕರ ಅತ್ಯಂತ ಮೆಚ್ಚಿನ ಅಧಿಕಾರಿಯಾಗಿದ್ದ ಇವರು ತಪ್ಪು ಮಾಡಿದಾಗ ಕರೆದು ಬುದ್ದಿಮಾತು ಹೇಳುತ್ತಿದ್ದರು ಚಾಲಕರ ಕಷ್ಟಗಳನ್ನು ಅರಿತು ಅವರೊಂದಿಗೆ ಸೌಜನ್ಯವಾಗಿ ವರ್ತಿಸುತ್ತಿದ್ದನ್ನು ಮರೆಯಲು ಸಾದ್ಯವಿಲ್ಲ ಎಂದರು.
ಪಿಎಸ್ಐ ಬಸವರಾಜ್ ಮಾತನಾಡಿ ವರ್ಗಾವಣೆ ನಮ್ಮಂತಹ ಅದಿಕಾರಿಗಳಿಗೆ ಹೊಸದಲ್ಲ ಆದರೆ ಕೊಪ್ಪದಲ್ಲಿ ಕೆಲಸ ಮಾಡಿದ್ದು ನನಗೆ ಅತ್ಯಂತ ಹಿತವಾದ ಅನುಭವ ನೀಡಿದೆ ಅಲ್ಲದೆ ಇಲ್ಲಿನ ಆಟೋಚಾಲಕರು ನೀಡಿದ ಪ್ರೀತಿ ನನಗೆ ಎಂದೂ ಸಹ ನೆನಪಿನಲ್ಲಿರುತ್ತದೆ ಎಂದರು.
ಈ ಸಂಧರ್ಭದಲ್ಲಿ ಕೊಪ್ಪ ಆಟೋ ಚಾಲಕರ ಸಂಘದ ಅಧ್ಯಕ್ಷ ಯು ಪಿ ವಿಜಯ್ ಕುಮಾರ್, ಗೂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗೇಶ್, ಸುರೇಂದ್ರ ಶೆಟ್ಟಿ, ವಿಕ್ರಂ, ರಾಘವೇಂದ್ರ ಕೇಸವೇ, ಅನಿಲ್, ಮತ್ತು ಆಟೋ ಚಾಲಕರು ಮತ್ತು ಮಾಲೀಕರು ಮುಂತಾದವರಿದ್ದರು.
ವರದಿ: ಶಶಿ ಬೆತ್ತದಕೊಳಲು
