ಹಾಸನ: ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಹೌದು .. ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ಅನೈತಿಕ ಸಂಬಂಧದ ವಿಚಾರವಾಗಿ ಅಡುಗೆ ಕಂಟ್ರಾಕ್ಟರ್ ಆನಂದ್ (48) ಎಂಬುವವರನ್ನು ಚಾಕುವಿನಿಂದ ಐದಾರು ಬಾರಿ ಇರಿದು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ.
ಮೃತ ಆನಂದ್ ಹಾಗೂ ಧರ್ಮೇಂದ್ರ ಎಂಬಾತನ ನಡುವೆ ದೀರ್ಘಕಾಲದಿಂದ ವೈಮನಸ್ಸು ಇತ್ತು ಎನ್ನಲಾಗಿದೆ. ಧರ್ಮೇಂದ್ರ ಆ ಮಹಿಳೆಯೊಂದಿಗೆ ಕಳೆದ ಎಂಟು ವರ್ಷಗಳಿಂದ ಗೆಳೆತನ ಹೊಂದಿದ್ದನು. ಈ ನಡುವೆ ಆನಂದ್ ಕೂಡ ಅದೇ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿದ್ದು, ಇಬ್ಬರ ನಡುವೆ ಜಗಳಕ್ಕೆ ನಾಂದಿ ಹಾಡಿತ್ತು.
ಬುಧವಾರ ರಾತ್ರಿ ನಗರದ ಬಾರ್ ಒಂದರಲ್ಲಿ ಆನಂದ್ ಮತ್ತು ಧರ್ಮೇಂದ್ರ ಭೇಟಿಯಾಗಿದ್ದರು. ಈ ವೇಳೆ ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಗಲಾಟೆಯ ನಂತರ ಆನಂದ್ ಅಲ್ಲಿಂದ ಹೊರಟು ತಮ್ಮ ಮನೆಗೆ ತೆರಳಿದ್ದರು. ಆದರೆ, ಕಿಚ್ಚು ತಣಿಯದ ಧರ್ಮೇಂದ್ರ ಮತ್ತೆ ಆನಂದ್‌ಗೆ ಫೋನ್ ಮಾಡಿ ಮಾತನಾಡಬೇಕೆಂದು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಧರ್ಮೇಂದ್ರನ ಕರೆ ನಂಬಿ ವಾಪಸ್ ಬಂದ ಆನಂದ್ ಮೇಲೆ ಸಂಚು ರೂಪಿಸಿದ್ದ ಧರ್ಮೇಂದ್ರ, ಚಾಕುವಿನಿಂದ ಮನಬಂದಂತೆ ಐದಾರು ಬಾರಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಮೃಪಟ್ಟಿದ್ದು, ಪಾತಕಿ ಧರ್ಮೇಂದ್ರ ಕೃತ್ಯದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಡಾವಣೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃ*ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಧರ್ಮೇಂದ್ರನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
