ಮೂಡಿಗೆರೆ: ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಇಂದಿನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಬ್ರಿಜೇಶ್ ಕಡಿದಾಳು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತಾಲೂಕಿನಲ್ಲಿ ಒಕ್ಕಲಿಗರ ಸಂಖ್ಯೆ ಅಧಿಕವಿರುವುದರಿಂದ ಕಳೆದ 8 ವರ್ಷಗಳ ಹಿಂದೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ಪ್ರಾರಂಭಿಸಿ ನೋಂದಣಿ (Register) ಮಾಡಿಸಲಾಯಿತು. ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಸಮುದಾಯದವರನ್ನು ಸಂಘಟಿಸುವ ಕಾರ್ಯ ನಡೆಸಿ, ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಅಲ್ಲದೇ ಸಂಘಟನೆಯ ಮೂಲಕ ಸಮುದಾಯದ ಜನರಿಗೆ ಆರೋಗ್ಯ ಸಮಸ್ಯೆ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡುವ ಜತೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಸಂಘಟನೆಯ ಏಳಿಗೆಗೆ ಶ್ರಮಿಸಲಾಗಿದೆ. ಇದೀಗ ವೇದಿಕೆಯ ಕಾರ್ಯಕಾರಿ ಸಮಿತಿ ಹಾಗೂ ಹಿರಿಯರ ಸಲಹೆಯ ಮೇರೆಗೆ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಸದಸ್ಯತ್ವ ಅಭಿಯಾನ ಪ್ರಾರಂಭಿಸಲಾಗಿದೆ,” ಎಂದು ಹೇಳಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಕ್ಕಿ ಮಾತನಾಡಿ, “ಮೊದಲು ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಾರ್ಚ್ ಅಂತ್ಯದವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದೆ. ನಂತರ ಉಳಿದ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದುವರಿಸಲಾಗುವುದು. ಸದಸ್ಯತ್ವ ಪಡೆದವರಿಗೆ ಮಾತ್ರ ಐಡಿ ಕಾರ್ಡ್ ಸಹಿತ ವಿವಿಧ ಬಗೆಯ ಸವಲತ್ತುಗಳನ್ನು ಪಡೆಯಲು ಅರ್ಹತೆ ಇರುತ್ತದೆ. ಇದರಿಂದ ಸಮುದಾಯದ ಜನರಿಗೆ ಅನುಕೂಲವಾಗುವ ಜತೆಗೆ ಸಂಘಟನೆಯ ಶಕ್ತಿ ಇನ್ನಷ್ಟು ಹೆಚ್ಚುತ್ತದೆ,” ಎಂದರು. ಇದೇ ವೇಳೆ ಅವರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವೇದಿಕೆಯ ಕಚೇರಿ ಸ್ಥಾಪನೆಗೆ ಹಾಗೂ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ನಿರ್ಮಾಣಕ್ಕೆ ಜಾಗ ಮೀಸಲಿರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಂಪೇಗೌಡ ಒಕ್ಕಲಿಗ ಸಂಘಟನೆಯ ಕಾರ್ಯದರ್ಶಿ ಪವನ್ ಪಟ್ಟದೂರು, ಉಪಾಧ್ಯಕ್ಷ ಅಶ್ವಥ್ ಬೆಟ್ಟಗೆರೆ, ಕಸಬಾ ಹೋಬಳಿ ಅಧ್ಯಕ್ಷ ದಯಾನಂದ್ ಕೆಸವಳಲು, ಡಿ.ಕೆ. ಲಕ್ಷ್ಮಣ್ ಗೌಡ, ಉಸ್ತುವಾರಿ ಸುರೇಶ್ ಕಣಚೂರು ಉಪಸ್ಥಿತರಿದ್ದರು.
