ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಮಕ್ಷಮ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತರಾಮನ್ ರವರನ್ನು ಪಾರ್ಲಿಮೆಂಟಿನಲ್ಲಿ ಭೇಟಿಯಾಗಿ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಸರ್ಪೇಸ್ ಕಾಯಿದೆ ಬಗ್ಗೆ ವಿವರಿಸಿ ಕಾಫಿ ಬೆಳೆಗಾರರ ಸಮಸ್ಯೆಯನ್ನು ಕೆಲ ಮಧ್ಯವರ್ತಿಗಳು ದುರುಪಯೋಗಪಡಿಸಿಕೊಂಡು ವಿದೇಶಗಳಲ್ಲಿ ಆನ್ ಲೈನ್ ಮೂಲಕ ಖರೀದಿಸಿ ಬಡ ರೈತರ ಭೂಮಿಯನ್ನು ಕಬಳಿಸುತ್ತಿದ್ದಾರೆ. ಇದಕ್ಕೆ ಕೆಲವಡೆ ಬ್ಯಾಂಕ್ ಅಧಿಕಾರಿಗಳ ಸಹಮತವೂ ಇದೆ ಎಂಬ ದೂರುಗಳಿವೆ.

ಕಾಫಿ ಬೆಳೆಗಾರರಲ್ಲಿ ಶೇಕಡ 90 ಕ್ಕೂ ಮಿಕ್ಕಿ ರೈತರು ಸಣ್ಣ ಹಿಡುವಳಿದಾರರಾಗಿದ್ದು, ಬಹುತೇಕ ಮಂದಿಗೆ ತಮ್ಮ ಭೂಮಿ ಸದ್ರಿ ಕಾಯಿದೆಯಿಂದ ಆನ್ ಲೈನ್ ಮೂಲಕ ಹರಾಜಾಗುತ್ತಿರುವುದು ಅರಿವಿಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಪೇಸ್ ಕಾಯಿದೆ ವಿರಹಿತಗೊಳಿಸಬೇಕು ಮತ್ತು ಆನ್ ಲೈನ್ ಮೂಲಕ ಕಾಫಿ ಬೆಳೆಗಳನ್ನು ಹರಾಜು ಹಾಕುವುದನ್ನು ತಡಗಟ್ಟಬೇಕೆಂದು ಮನವಿ ಮಾಡಿದರು.

ಮಾಜಿ ಪ್ರಧಾನಮಂತ್ರಿಗಳಾದ ದೇವೆಗೌಡರ ಸಮಕ್ಷಮ ನಡೆದ ಚರ್ಚೆಯ ನಂತರ ಸಚಿವೆ ನಿರ್ಮಲಾ ಸೀತಾರಾಮನ್ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡುವುದಾಗಿ ಮತ್ತು ತುರ್ತಾಗಿ ಕಾಫಿ ಬೆಳೆ ಸಾಲಗಾರರ ತೋಟವನ್ನು ಆನ್ ಲೈನ್ ಹರಾಜು ನಿಲ್ಲಿಸಲು ಆದೇಶ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಯೋಗದಲ್ಲಿ ಸಂಸದರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಶ್ರೀ ಡಾ ಮಂಜುನಾಥ್, ಶ್ರೀ ಮಲ್ಲೇಶ್ ಮುಂತಾದವರಿದ್ದರು. ತಮ್ಮ ನಿಯೋಗದ ಭೇಟಿ ಸಂದರ್ಭ ಉಪಸ್ಥಿತರಿದ್ದು, ಮಾರ್ಗದರ್ಶನ ಮಾಡಿದ ಮಾಜಿ ಪ್ರಧಾನ ಮಂತ್ರಿಗಳಾದ ದೇವೇಗೌಡರಿಗೆ ಸಂಸದ ಕೋಟ ಕೃತಜ್ಞತೆ ತಿಳಿಸಿದ್ದಾರೆ.

