ಶೃಂಗೇರಿ: ಕಾಡಾನೆಗಳ ಹಾವಳಿ ನಿಯಂತ್ರಣಕ್ಕಾಗಿ ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತಿರುವ ಸೋಲಾರ್ ಟೆಂಟಕಲ್ ಬೇಲಿಯ ಕಾಮಗಾರಿಯನ್ನು ಮಂಗಳವಾರ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತ ಒಕ್ಕೂಟದ ಕಾರ್ಯಾಧ್ಯಕ್ಷರಾದ ಶ್ರೀ ನಾಗೇಶ್ ಎಂ.ಎನ್. ಅವರು ಮಾತನಾಡಿ, ಇತ್ತೀಚೆಗೆ ನಡೆದ ರೈತರ ಬೃಹತ್ ಪ್ರತಿಭಟನೆಯಲ್ಲಿ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸರ್ಕಾರವು ತಕ್ಷಣವೇ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂದು ಆಗ್ರಹಿಸಲಾಗಿತ್ತು ಹಾಗೂ ಮಾನ್ಯ ಶಾಸಕರು ಸಹ ಈ ಹಿಂದಿನ ಹಲವು ಕಾರ್ಯಕ್ರಮಗಳಲ್ಲಿ ಟೆಂಟಕಲ್ ಬೇಲಿ ಶಾಶ್ವತ ಪರಿಹಾರವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೂ, ಅರಣ್ಯ ಇಲಾಖೆ ಇದೀಗ ಕಳಪೆ ಗುಣಮಟ್ಟದ ಟೆಂಟಕಲ್ ಬೇಲಿಯನ್ನು ಅಳವಡಿಸುತ್ತಿರುವುದು ವಿಷಾದನೀಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದು ಸಂಪೂರ್ಣವಾಗಿ ಅವೈಜ್ಞಾನಿಕ ವಿಧಾನವಾಗಿದ್ದು, ಇದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸರ್ಕಾರವು ತಕ್ಷಣ ಈ ವಿಷಯದ ಬಗ್ಗೆ ಗಮನ ಹರಿಸಿ, ಕಾಡಾನೆಗಳ ಸಮಸ್ಯೆಗೆ ಶಾಶ್ವತ ಹಾಗೂ ಪರಿಣಾಮಕಾರಿ ಪರಿಹಾರ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

