NR ಪುರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತೆ ಎಂಬುದಕ್ಕೆ ಕಾರಣಕ್ಕೆ ಮಲಗಿದ್ದ ದಂಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಭೀಕರ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.

ಹೌದು .. 2019ರ ಆಗಸ್ಟ್ 30ರಂದು ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಸಾತ್ಕೋಳಿ ಗ್ರಾಮದ ಮನೆಯಲ್ಲಿ ಮಲಗಿದ್ದ ಗಂಡ-ಹೆಂಡತಿಯನ್ನು ಆರೋಪಿ ಗೋವಿಂದಪ್ಪ ಎಂಬಾತ ಹತ್ಯೆ ಮಾಡಿದ್ದ. ಆರೋಪಿ ಮಚ್ಚಿನಿಂದ ದಾಳಿ ನಡೆಸಿದ್ದ ಪರಿಣಾಮ ಧರ್ಮಯ್ಯ (53) ಮತ್ತು ಭಾರತಿ (33) ಮೃತಪಟ್ಟಿದ್ದರು.

ಭಾರತಿಯೊಂದಿಗೆ ಆರೋಪಿ ಗೋವಿಂದಪ್ಪನಿಗೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರವಾಗಿ ಗೋವಿಂದಪ್ಪನ ಜೊತೆ ಭಾರತಿ ಪತಿ ಧರ್ಮಯ್ಯ ಜಗಳವಾಡಿದ್ದ. ಬಳಿಕ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಗಲಾಟೆ ನಡೆದ ಎರಡು ತಿಂಗಳ ಬಳಿಕ ಭಾರತಿ ಮತ್ತು ಪತಿ ಧರ್ಮಯ್ಯನನ್ನು ಗೋವಿಂದಪ್ಪ ಹತ್ಯೆ ಮಾಡಿದ್ದು, ಈ ಬಗ್ಗೆ NR ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ಸಂಬಂಧ ಮಹತ್ವದ ತೀರ್ಪು ನೀಡಿರುವ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆಯ ಜೊತೆಗೆ 20 ಸಾವಿರ ರೂ. ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.
