ಎನ್. ಆರ್. ಪುರ: ಅಮ್ಮ ಫೌಂಡೇಶನ್ ತುಮಖಾನೆ ವತಿಯಿಂದ 33ನೇ ಆರೋಗ್ಯ ಶಿಬಿರದ ಅಂಗವಾಗಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ಹೊಡೆಯಾಲದ ಶ್ರೀರಾಮ ದೇವಸ್ಥಾನದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಹೊಡೆಯಾಲ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಕಳೆದ ಆರೋಗ್ಯ ಶಿಬಿರದಲ್ಲಿ ನಡೆಸಿದ ಕಣ್ಣಿನ ತಪಾಸಣೆಯ ಆಧಾರದ ಮೇಲೆ ಅಗತ್ಯವಿದ್ದವರಿಗೆ ಈ ಕನ್ನಡಕಗಳನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎನ್.ಆರ್.ಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಪಿ.ಜೆ. ಅಂತೋನಿ ಅವರು, ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಮನೆಮನೆಗಳಲ್ಲಿ ಹೆಸರು ಮಾಡಿರುವ ಸಮಾಜ ಸೇವಾ ಸಂಸ್ಥೆಯೆಂದರೆ ಅದು ಅಮ್ಮ ಫೌಂಡೇಶನ್ ಎಂದು ಪ್ರಶಂಸಿಸಿದರು. ಸಮಾಜಕ್ಕೆ ಕೊಡುಗೆ ನೀಡಿದಾಗ ಮಾತ್ರ ವ್ಯಕ್ತಿಯ ಆಸ್ತಿ-ಸಂಪತ್ತಿಗೆ ನಿಜವಾದ ಮೌಲ್ಯ ಸಿಗುತ್ತದೆ ಎಂಬ ನಂಬಿಕೆಯನ್ನು ಹೊಂದಿರುವ ಸುಧಾಕರ್ ಶೆಟ್ಟಿ ಅವರು ತಮ್ಮ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಬಳಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ನಮ್ಮ ಸುತ್ತಮುತ್ತಲಿನ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮನೋಭಾವ ಇಂದು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಸುಧಾಕರ್ ಶೆಟ್ಟಿ ಅವರು “ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎಂಬ ಮಾತಿನ ಅರ್ಥವನ್ನು ನೈಜ ಜೀವನದಲ್ಲಿ ಅನುಸರಿಸುತ್ತಿದ್ದಾರೆ. ತಮ್ಮ ಅನುಭವ ಹಾಗೂ ಅರಿವನ್ನು ಸಮಾಜ ಸೇವೆಗೆ ವಿನಿಯೋಗಿಸಿ, ತಮ್ಮ ಊರಿನ ಬಡವರ ನೆರವಿಗೆ ಧಾವಿಸುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಇದುವರೆಗೂ 33 ಆರೋಗ್ಯ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಅಮ್ಮ ಫೌಂಡೇಶನ್, ಕೇವಲ ಆರೋಗ್ಯ ತಪಾಸಣೆ ಮಾತ್ರವಲ್ಲದೆ ಅದರ ಮುಂದುವರಿದ ಸೇವೆಯಾಗಿ ಅಗತ್ಯವಿರುವವರಿಗೆ ಕನ್ನಡಕ ವಿತರಣೆ, ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡುತ್ತಿದೆ. ಈ ಮೂಲಕ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಯ ಕಾರ್ಯವನ್ನು ಶ್ರೀ ಪಿ ಜೆ ಆಂತೋನಿರವರು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಹೊಡೆಯಾಲ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಹಿರಿಯಣ್ಣ, ರೋಟರಿ ಸಂಸ್ಥೆ ಅಧ್ಯಕ್ಷರಾದ ವಿನಯ್ ಕಣಿವೆ, ಶ್ರೀ ಪ್ರಫುಲ್ಲ ಕೆ ಹಾಗು ಮುತ್ತಿನ ಕೊಪ್ಪ ಪ್ರಫುಲ್ಲ ಚಂದ್ರರವರು, ಅಮ್ಮ ಫೌಂಡೇಶನ್ ಯೋಜನಾಧಿಕಾರಿಗಳಾದ ವೆಂಕಪ್ಪ ಆಚಾರ್, ಕೃಷಿಕರಾದ ರಮೇಶ್ ಶೆಟ್ಟಿ, ರವಿಕುಮಾರ್ ಕೆ, ಮುತ್ತಿನಕೊಪ್ಪ ಕೌಶಿಕ್ ಗೌಡ, ಪ್ರಕಾಶ್ ಹೊಡೆಯಾಲ, ಅಭಿನವ್, ಅಮ್ಮ ಫೌಂಡೇಶನ್ ನಿರ್ದೇಶಕರಾದ ಪ್ರಭಾಕರ್ ಶೆಟ್ಟಿ ಹಾಗು ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್ ಸೇರಿದಂತೆ ಅಮ್ಮ ಫೌಂಡೇಶನ್ ಪೂರ್ಣಾವಧಿ ಕಾರ್ಯಕರ್ತರಗಳು ಉಪಸ್ಥಿತರಿದ್ದರು.
