Monday, March 30, 2026
Homeಜಿಲ್ಲಾಸುದ್ದಿಬಸರಿಕಟ್ಟೆಯಲ್ಲಿ ಅಮ್ಮ ಫೌಂಡೇಶನ್‌ನ 34ನೇ ಆರೋಗ್ಯ ಶಿಬಿರ : ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಯಶಸ್ವಿ

ಬಸರಿಕಟ್ಟೆಯಲ್ಲಿ ಅಮ್ಮ ಫೌಂಡೇಶನ್‌ನ 34ನೇ ಆರೋಗ್ಯ ಶಿಬಿರ : ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಯಶಸ್ವಿ

ಕೊಪ್ಪ: ಅಮ್ಮ ಫೌಂಡೇಶನ್ ವತಿಯಿಂದ 34ನೇ ಆರೋಗ್ಯ ಶಿಬಿರದ ಅಂಗವಾಗಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವು ದಿನಾಂಕ 29.03.2026ರಂದು ಬಸರಿಕಟ್ಟೆಯ ಶ್ರೀ ಸದ್ಗುರು ಸುವರ್ಣ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ವಹಿಸಿದ್ದು, ಕಾರ್ಯಕ್ರಮವನ್ನು ಬಸರಿಕಟ್ಟೆಯ ಕೃಷಿಕರಾದ ಶ್ರೀ ಕೆ.ಟಿ. ಚನ್ನಕೇಶವ ಗೌಡ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಳೆದ ಆರೋಗ್ಯ ಶಿಬಿರದಲ್ಲಿ ಕಣ್ಣಿನ ತಪಾಸಣೆಗೆ ಒಳಪಟ್ಟು ಕನ್ನಡಕಕ್ಕೆ ಆಯ್ಕೆಯಾದ ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಗ್ರಾಮೀಣ ಭಾಗದ ಜನರು ಈ ಸೇವೆಯಿಂದ ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎನ್.ಆರ್.ಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಪಿ.ಜೆ. ಅಂತೋನಿ ಅವರು, ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ್ ಶೆಟ್ಟಿ ಅವರ ಸಮಾಜಸೇವಾ ಕಾರ್ಯಗಳನ್ನು ಪ್ರಶಂಸಿಸಿದರು. ಕಳೆದ ಐದು ವರ್ಷಗಳಿಂದ ಶೃಂಗೇರಿ ಕ್ಷೇತ್ರದ ಎಲ್ಲಾ ಭಾಗಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿರುವುದು ಶ್ಲಾಘನೀಯ ಸಾಧನೆ ಎಂದರು. ಕಣ್ಣಿನ ಸಮಸ್ಯೆಗಳಿಂದ ಬಳಲುವವರಿಗೆ ಚಿಕಿತ್ಸೆ, ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಿಸುವುದರ ಜೊತೆಗೆ ರೋಗಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವವರೆಗೆ ಹೊಣೆ ಹೊತ್ತು ಕಾರ್ಯನಿರ್ವಹಿಸುತ್ತಿರುವುದು ಅಮ್ಮ ಫೌಂಡೇಶನ್‌ನ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಲಯನ್ಸ್ ಸಂಸ್ಥೆ ಅನೇಕ ರಾಷ್ಟ್ರಗಳಲ್ಲಿ ಕೋಟ್ಯಂತರ ಜನರ ಕಣ್ಣಿನ ಸಮಸ್ಯೆ ನಿವಾರಣೆಗೆ ಸೇವೆ ಸಲ್ಲಿಸಿರುವುದನ್ನು ಉಲ್ಲೇಖಿಸಿದ ಅವರು, ಅದೇ ಮಾದರಿಯಲ್ಲಿ ಸುಧಾಕರ್ ಶೆಟ್ಟಿ ಅವರು ಮಲೆನಾಡಿನ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಆರೋಗ್ಯ ಶಿಬಿರಗಳು, ಉಚಿತ ಕನ್ನಡಕ ವಿತರಣೆ, ಕಣ್ಣಿನ ಶಸ್ತ್ರಚಿಕಿತ್ಸೆ, ವೀಲ್‌ಚೇರ್ ಮತ್ತು ವಾಕರ್ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಕಷ್ಟದಲ್ಲಿರುವವರು ಸಹಾಯ ಕೇಳಲು ಮುಂದೆ ಬಾರದ ಪರಿಸ್ಥಿತಿಯಲ್ಲಿ, ಅಂತಹವರನ್ನು ಹುಡುಕಿಕೊಂಡು ಹೋಗಿ ನೆರವು ನೀಡುವ ಮನೋಭಾವವು ಅತ್ಯಂತ ವಿಶಿಷ್ಟವಾಗಿದ್ದು, ಸುಧಾಕರ್ ಶೆಟ್ಟಿ ಅವರ ಸೇವಾ ನಿಲುವು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದು ಶ್ರಿ ಪಿ ಅಂತೋನಿ ರವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸದ್ಗುರು ವಿದ್ಯಾಸಂಸ್ಥೆ ಬಸರಿಕಟ್ಟೆಯ ಕಾರ್ಯದರ್ಶಿಗಳಾದ ಶ್ರೀ ಜಿ.ಸಿ. ಗೋಪಾಲಕೃಷ್ಣ ಅವರು, ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ಅವರ ಸಮಾಜಸೇವಾ ಕಾರ್ಯಗಳನ್ನು ಉನ್ನತವಾಗಿ ಪ್ರಶಂಸಿಸಿದರು. ತಮ್ಮ ತಾಯಿಯ ಸ್ಮರಣಾರ್ಥವಾಗಿ ಸಮಾಜದ ಪ್ರತಿಯೊಬ್ಬರನ್ನೂ ತಮ್ಮ ಕುಟುಂಬದ ಸದಸ್ಯರಂತೆ ಕಂಡು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಅಪರೂಪದ ಸಾಧನೆ ಎಂದು ಅವರು ಹೇಳಿದರು.

ತಂದೆ-ತಾಯಿಗಳು ನಮಗೆ ಜನ್ಮ ನೀಡಿದ್ದು ಮಾತ್ರವಲ್ಲದೆ, ಜೀವನದ ಮೌಲ್ಯಗಳನ್ನು ಕಲಿಸುತ್ತಾರೆ. ಅವರ ಋಣವನ್ನು ಸಂಪೂರ್ಣವಾಗಿ ತೀರಿಸುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವರ ವೃದ್ಧಾಪ್ಯದಲ್ಲಿ ಅವರಿಗೆ ಆರೈಕೆ ನೀಡುವುದು, ಅವರ ಮೌಲ್ಯಗಳನ್ನು ಅನುಸರಿಸಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳನ್ನು ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಕಷ್ಟದಲ್ಲಿರುವವರಿಗೆ ನೆರವಾಗುವುದು ದೇವರ ಸೇವೆಯಂತೆಯೇ ಆಗಿದ್ದು, ಅಂತಹ ಸೇವೆಯಿಂದಲೇ ನಿಜವಾದ ಮಾನವೀಯತೆ ವ್ಯಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ನಿಟ್ಟಿನಲ್ಲಿ ಸುಧಾಕರ್ ಶೆಟ್ಟಿ ಅವರು ಆರೋಗ್ಯ ಶಿಬಿರಗಳ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು, ವಿಶೇಷವಾಗಿ ಕಣ್ಣಿನ ಸಮಸ್ಯೆಯಿಂದ ಬಳಲುವವರಿಗೆ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಿಕೊಡುವ ಮೂಲಕ ಅವರ ಜೀವನದಲ್ಲಿ ಬೆಳಕು ಮೂಡಿಸುತ್ತಿದ್ದಾರೆ ಎಂದರು. ಯಾವುದೇ ಆರ್ಥಿಕ ಭಾರವಿಲ್ಲದೆ ಇಂತಹ ಸೌಲಭ್ಯಗಳನ್ನು ಒದಗಿಸುವುದು ಅತ್ಯಂತ ಶ್ರೇಷ್ಠ ಮತ್ತು ಮಾದರಿಯಾದ ಸೇವೆಯಾಗಿದ್ದು, ಸಮಾಜದ ಎಲ್ಲ ವರ್ಗಗಳಿಗೂ ಇದು ಪ್ರೇರಣೆಯಾಗಲಿದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!