ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ಅವಧಿ ಮುಗಿಯುವ ಮುನ್ನವೇ ಶಾಲಾ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿರುವಾಗಲೇ ಶಿಕ್ಷಕರನ್ನು ಜನಗಣತಿ ಕಾರ್ಯದ ತರಬೇತಿಗೆ ಕರೆದಿರುವುದಕ್ಕೆ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಆಕ್ಷೇಪ ವ್ಯಕ್ತಪಡಿಸಿ ಶಾಲೆಗಳು ಮುಗಿದ ಬಳಿಕ ತರಬೇತಿ ನಡೆಸಲು ಮನವಿ ಮಾಡಿದರು. ನಂತರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷರು ಏಪ್ರಿಲ್ 6-7 ರ ವರೆಗೆ ಪರೀಕ್ಷೆಗಳು ನಡೆಯುತ್ತಿದೆ.

ಈ ಮಧ್ಯೆ ದಿಢೀರ್ ಶಿಕ್ಷಕರನ್ನು ತರಬೇತಿಗೆ ಕರೆದಿರುವುದು ಮಕ್ಕಳಿಗೆ ತೀವ್ರ ತೊಂದರೆಯಾಗಿದೆ.ಇದರಿಂದ ಶಾಲೆಗೆ ಮಕ್ಕಳ ಶೈಕ್ಷಣಿಕ ವರದಿಯನ್ನು ನೋಡಲು ಬರುವ ಪೋಷಕರಿಗೆ ಶಿಕ್ಷಕರು ಸಿಗದೆ ಇದು ಶಾಲೆಯ ದಾಖಲಾತಿಯ ಮೇಲೆ ಪರಿಣಾಮ ಬೀರುತ್ತದೆ.
ಇದನ್ನು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಗಮನಕ್ಕೆ ತಂದು ಶಾಲೆಯ ಪರೀಕ್ಷೆಗಳು ಪೂರ್ಣಗೊಂಡ ಮೇಲೆ ತರಬೇತಿ ನಡೆಸಲು ಮನವಿ ಮಾಡಲಾಗಿದೆ ಎಂದರು.
