ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಶ್ರೀನಂದಾ ಮೃತದೇಹವು 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. ಆದ್ರೆ, ಈ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ.
ಹೌದು .. ನಾಲ್ಕು ದಿನಗಳಿಂದ ಶ್ರೀನಂದಗಾಗಿ ಬಹಳ ಹುಡುಕಾಟ ನಡೆಸಲಾಗಿತ್ತು. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಶೋಲಾ ಪ್ರದೇಶದಲ್ಲಿ ಈಕೆ ನಾಪತ್ತೆಯಾಗಿದ್ದಳು. ಈಕೆ ಕೂಡ ಕೇರಳ ಮೂಲದ ಬಾಲಕಿಯಾಗಿದ್ದು, 41 ಮಂದಿಯ ಜೊತೆಗೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದಳು. ಒಂದು ಹಂತದಲ್ಲಿ ಈಕೆ ಕುಟುಂಬದಿಂದ ಬೇರ್ಪಟ್ಟಿದ್ದಳು. ಅದಕ್ಕೂ ಮುನ್ನ ಆಕೆ ಲವಲವಿಕೆಯಿಂದ ರೀಲ್ಸ್ ಮಾಡಿದ್ದು ಕಂಡುಬಂದಿತ್ತು.
ಆದ್ರೆ, ಶ್ರೀನಂದಾ ಅದು ಹೇಗೆ ಬಿದ್ದಿದ್ದಾಳೆ ಎನ್ನುವುದೇ ನಿಗೂಢವಾಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿತ್ತು. ಆದ್ರೆ, ಇದೀಗ ತಂದೆ, ಪೊಲೀಸರ ಮುಂದೆ ಹೇಳಿರುವ ಅದೊಂದು ಹೇಳಿಕೆ ಶ್ರೀನಂದಾ ಸಾವಿನ ಬಗ್ಗೆ ಮತ್ತೊಂದು ಅನುಮಾನ ಮೂಡಿದ್ದು, ತಂದೆ ಬೈದಿದ್ದಕ್ಕೆ ಶ್ರೀನಂದಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಶ್ರೀನಂದಾ ತಂದೆ ರಮೇಶ್ ಅವರು ಮೊಬೈಲ್ ವಿಚಾರಕ್ಕೆ ಮಗಳಿಗೆ ಬೈದಿದ್ದ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಮಾಣಿಕ್ಯಧಾರಾ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಶ್ರೀನಾಂದಗೆ ತಂದೆ ರಮೇಶ್ ಬೈದಿದ್ದು, ಅಲ್ಲದೇ ಮೊಬೈಲ್ ಕೊಡುವಂತೆ ವಾರ್ನ್ ಮಾಡಿದ್ದ. ಇದರಿಂದ ಮನನೊಂದು ಶ್ರೀನಂದಾ, ಮಾಣಿಕ್ಯಧಾರಾದ ಫಾಲ್ಸ್ಗೆ ತೆರಳದೆ ವಾಪಸ್ ವಾಪಸ್ ಆಗಿದ್ದಳು. ಬಳಿಕ ಶ್ರೀನಂದಾ ಕಾಣೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ತಂದೆ ಬೈದಿದ್ದಕ್ಕೆ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾ ಪಾರ್ಕಿಂಗ್ ಸ್ಥಳದಿಂದ ಜಿಗಿದಿರಬಹುದು ಎಂದು ಶಂಕಿಸಲಾಗಿದೆ.
ಇನ್ನೂ ಘಟನೆ ಬಗ್ಗೆ ಪೊಲೀಸರು ಸಹ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆ ನಂತರ ಇದೊಂದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಗೊತ್ತಾಗಲಿದೆ.
