ಮೂಡಿಗೆರೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಾತು ಬಾರದ ಮೂಕ ಪ್ರಾಣಿಗಳ ದಾಹ ನೀಗಿಸಲು ಮೂಡಿಗೆರೆಯಲ್ಲಿ ಮಾನವೀಯ ಅಭಿಯಾನ ಗಮನ ಸೆಳೆಯಿತು.
ಜನ ಸಹಾಯ ಸೌಹಾರ್ದ ವೇದಿಕೆ (JSSV) ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ‘ಒಂದು ಹನಿ ನೀರು ಮೂಕ ಪ್ರಾಣಿಗಳ ಬದುಕಿನೆಡೆಗೆ’ ಎಂಬ ಅರ್ಥಪೂರ್ಣ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಪಟ್ಟಣದ ಲಯನ್ಸ್ ವೃತ್ತದ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಪೊಲೀಸರು ಹಾಗೂ ಪೊಲೀಸ್ ಅಧಿಕಾರಿಗಳು ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ SYS ಕಾರ್ಯದರ್ಶಿ ಸುಲೈಮಾನ್ ಉಸ್ತಾದ್, ಕಾಫಿನಾಡು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ದಿನೇಶ್, ಸಮಾಜಸೇವಕರಾದ ಖಾಲಿದ್ ಮೂಡಿಗೆರೆ, ‘ಪೀಸ್ & ಅವೆರ್ನೆಸ್’ ಟ್ರಸ್ಟ್ ಸ್ಥಾಪಕರಾದ ಅಲ್ತಾಫ್ ಬಿಳಗುಳ, ಪ್ರವೀಣ್ ಕುಟ್ಟಿ ಕೃಷ್ಣಪುರ, ಜೆಎಸ್‌ಎಸ್‌ವಿ ಅಧ್ಯಕ್ಷ ಶಿಹಾಬುದೀನ್ ಹಾಜಿ ಸೇರಿದಂತೆ ಹಲವು ಗಣ್ಯರು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.
ಬಳಿಕ ಬಿಳಗುಳ, ಹ್ಯಾಂಡ್ ಪೋಸ್ಟ್ ಮತ್ತು ಜನ್ನಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ಅಳವಡಿಸಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಬಿಳಗುಳದಲ್ಲಿ ಮೋಹಿಯ್ಯದ್ದಿನ್ ಸೇಠ್ ಹಾಗೂ ಸಮಾಜಸೇವಕ ಹಸೆನಾರ್ ಬಿಳಗುಳ ಅವರ ನೇತೃತ್ವದಲ್ಲಿ, ಹ್ಯಾಂಡ್ ಪೋಸ್ಟ್‌ನಲ್ಲಿ ಅಬೂಬಕ್ಕರ್ ಹಾಗೂ ಸ್ಥಳೀಯರ ಸಹಕಾರದಿಂದ, ಜನ್ನಾಪುರದಲ್ಲಿ ಆಟೋ ಚಾಲಕರ ನೇತೃತ್ವದಲ್ಲಿ ನೀರಿನ ತೊಟ್ಟಿಗಳನ್ನು ಸ್ಥಾಪಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್‌ವಿ ಸಂಸ್ಥಾಪಕ ಎಂ.ಎಸ್. ಆಸೀಫ್ ಮಾತನಾಡಿ, “ಮನುಷ್ಯನು ತನ್ನ ದಾಹವನ್ನು ತಾನೇ ತೀರಿಸಿಕೊಳ್ಳಬಹುದು. ಆದರೆ ಮೂಕ ಪ್ರಾಣಿಗಳು ನಮ್ಮ ಕರುಣೆಗೆ ಕಾಯುತ್ತಿವೆ. ಅವರ ದಾಹ ನೀಗಿಸುವುದು ನಮ್ಮೆಲ್ಲರ ಜವಾಬ್ದಾರಿ,” ಎಂದು ಹೇಳಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಮಾನವೀಯತೆಯನ್ನು ಮೆರೆದರೆ ಸಮಾಜಕ್ಕೆ ಉತ್ತಮ ಸಂದೇಶ ಸಿಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆರಿಫ್, ಕಾರ್ಯದರ್ಶಿ ಸಯ್ಯದ್ ಸಮೀರ್, ಜೊತೆ ಕಾರ್ಯದರ್ಶಿ ದಾವೂದ್, ಸದಸ್ಯರಾದ ಸೃಜನ್, ಶುಹೈಬ್, ರಾಫೀದ್, ಶುಕೂರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು.
ಸಂಘಟಕರ ಮಾಹಿತಿ ಪ್ರಕಾರ, ಈ ಅಭಿಯಾನ ಮುಂದಿನ ದಿನಗಳಲ್ಲೂ ನಿರಂತರವಾಗಿ ಮುಂದುವರಿಯಲಿದ್ದು, ಮೂಕ ಪ್ರಾಣಿಗಳ ದಾಹ ನೀಗಿಸುವ ಕಾರ್ಯದಲ್ಲಿ ಸಾರ್ವಜನಿಕರು ಕೈಜೋಡಿಸುವಂತೆ ವಿನಂತಿಸಲಾಗಿದೆ
