ಶೃಂಗೇರಿ ತಾಲೂಕಿನ ಮೆಣಸೆ ಗ್ರಾ ಪಂ ವ್ಯಾಪ್ತಿಯ ಕುಂಚೇಬೈಲು ಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಹಮ್ಮಿಕೊಂಡಿದೆ. ಈ ವೇಳೆ ಇದರಲ್ಲಿ ಕಳಪೆ ಕಾಮಗಾರಿ,ಅಪೂರ್ಣ ಕಾಮಗಾರಿ, ಅನೇಕ ಅದ್ವಾನಗಳ ಕುರಿತು ನಿರಂತರವಾಗಿ ಸಾರ್ವಜನಿಕರಲ್ಲಿ ಪ್ರಶ್ನೆಗಳು ಮೂಡುತ್ತಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಮಲೆನಾಡು ಕರಾವಳಿ ಜನಪರ ಒಕ್ಕೂಟವು ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತ ಬಂದಿತ್ತು. ಅಧಿಕಾರಿ ವರ್ಗಗಳಿಂದ ಸಮಂಜಸವಾದ ಉತ್ತರ ಬಾರದ್ದರಿಂದ
ಮಲೆನಾಡು ಕರಾವಳಿ ಜನಪರ ಒಕ್ಕೂಟ ಶೃಂಗೇರಿ ತಾಲೂಕಿನ ಕುಂಚೇಬೈಲಿನಲ್ಲಿ ರಸ್ತೆ ತಡೆ ಮಾಡಲು ನಿರ್ಧರಿಸಿತ್ತು.
ಈ ವಿಚಾರವಾಗಿ ಪತ್ರಿಕೆಗಳಲ್ಲಿ ಬಂದ ವರದಿ ಮೂಲಕ ವಿಷಯ ತಿಳಿದು, ಶೃಂಗೇರಿ ತಾಲೂಕಿನ ಕುಂತೂರು ಹೇರೂರು ಗಿಣಿಕಲು ಭಾಗದ ಕಾಮಗಾರಿ ಪರಿಶೀಲನೆಗಾಗಿ ಸಹಾಯಕ ಅಭಿಯಂತರರಾಗಿರುವ ಭುವನೇಂದ್ರರವರು ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಒಂದು ತಿಂಗಳ ಒಳಗಾಗಿ ಸಮರ್ಪಕವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆಯನ್ನು ನೀಡಿದರು. ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಪ್ರತಿ ಮನೆಗಳಿಗೆ ನೀರು ಸರಬರಾಜನ್ನು ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರೊಡಗೂಡಿ ಮಲೆನಾಡು ಕರಾವಳಿ ಜನಪರ ಒಕ್ಕೂಟವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಂಚಾಲಕರಾಗಿರುವ ಅನಿಲ್ ಹೊಸಕೊಪ್ಪ ತಿಳಿಸಿದರು,
ಈ ವೇಳೆ ಗ್ರಾಮಸ್ಥರಾದ ಮಿಥುನ್ ಗಿಣಕಲ್, ಶ್ರೀಕಾಂತ, ಸಂತೋಷ್ ಕಾಳ್ಯ,ಜಗದೀಶ್ ಕಣದಮನೆ ಹಾಗೂ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ವಿಠಲ್, ಶೃಂಗೇರಿ
