ಮೂಡಿಗೆರೆ: ಕಾಡುಜಾತಿಯ ಮರಗಳ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ತಾಲ್ಲೂಕಿನ ಹಂಡುಗುಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಹಂಡುಗುಳಿ ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಲಾರಿಯೊಂದರಲ್ಲಿ ಮರದ ದಿಮ್ಮಿಗಳನ್ನು ತುಂಬಿ ನಿಲ್ಲಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಲಾರಿಯಲ್ಲಿ ಕಾಡುಜಾತಿಯ ಮರಗಳ ದಿಮ್ಮಿಗಳು ಗಳು ಪತ್ತೆಯಾದವು.
ಲಾರಿಯಲ್ಲಿದ್ದ ಚಿಕ್ಕಮಗಳೂರು ತಾಲ್ಲೂಕಿನ ಹೊಸಕೋಟೆ ಗ್ರಾಮದ ರಂಗರಾಜು ಅವರನ್ನು ವಿಚಾರಣೆ ನಡೆಸಿದಾಗ, ಸಾಗಿಸಲಾಗುತ್ತಿದ್ದ ಮರದ ದಿಮ್ಮಿಗಳು ಶಿವಪ್ಪ, ಪ್ರಕಾಶ್ ಹಾಗೂ ಇತರರಿಗೆ ಸೇರಿದ್ದು, ಸಾಗಾಣಿಕೆಗೆ ಅಗತ್ಯವಾದ ರಹದಾರಿ (ಪರವಾನಗಿ) ಇಲ್ಲ ಎಂಬುದು ಗೊತ್ತಾಯಿತು.
ಅಧಿಕಾರಿಗಳು ಮರದ ದಿಮ್ಮಿಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದು, ರಂಗರಾಜು, ಹಳೆಮೂಡಿಗೆರೆಯ ಶಿವಪ್ಪ, ಮುತ್ತಿಗೆಪುರದ ಪ್ರಕಾಶ್, ಆನೆದಿಬ್ಬದ ಚಂದ್ರಶೇಖರ್, ಜೋಗಣ್ಣಕೆರೆಯ ರಘು ಹಾಗೂ ಹಳೆಕೋಟೆಯ ಚಂದ್ರಶೇಖರ್ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಡಿಎಫ್‌ಒ ಕೆ.ಟಿ. ಬೋರಯ್ಯ ಹಾಗೂ ಎಸಿಎಫ್ ಆಕರ್ಷ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಮಂಜುನಾಥ್, ಡಿಆರ್‌ಎಫ್‌ಒ ಕೆ.ಎಸ್. ಅಶ್ವತ್, ಎಸ್.ಡಿ. ದೀಪಕ್, ಗಸ್ತು ಅರಣ್ಯ ಪಾಲಕರಾದ ಅಭಿಜಿತ್, ಆದರ್ಶ್, ಮನು ಹಾಗೂ ವಾಹನ ಚಾಲಕರಾದ ನವರಾಜ್ ಮತ್ತು ಸುಮಂತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
