Wednesday, May 27, 2026
Homeಕ್ರೈಮ್ಬಾಳೆಹೊನ್ನೂರು: ವರ್ತಕರಿಗೆ ಕಲಬೆರಕೆ ಜೇನು ತುಪ್ಪ ನೀಡಿ ವಂಚನೆ: ತಡವಾಗಿ ಬೆಳಕಿಗೆ

ಬಾಳೆಹೊನ್ನೂರು: ವರ್ತಕರಿಗೆ ಕಲಬೆರಕೆ ಜೇನು ತುಪ್ಪ ನೀಡಿ ವಂಚನೆ: ತಡವಾಗಿ ಬೆಳಕಿಗೆ

ಬಾಳೆಹೊನ್ನೂರು :ಪಟ್ಟಣಗಳಲ್ಲಿ ವ್ಯಾಪಾರ ನಡೆಸುವ ವರ್ತಕರಿಗೆ ಸಕ್ಕರೆ, ಬೆಲ್ಲ ಮಿಶ್ರಿತವಾಗಿರುವ ಕಲಬೆರಕೆಯಾದ ಜೇನು ತುಪ್ಪ ನೀಡಿ ಹಣ ಪಡೆದು ವಂಚಿಸಿ ತೆರಳಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣ ವ್ಯಾಪ್ತಿಯಲ್ಲಿರುವ ದೊಡ್ಡ ಕಟ್ಟಡಗಳಲ್ಲಿ ಗೂಡು ಕಟ್ಟುವ ಹೆಜ್ಜೇನುಗಳ ಗೂಡನ್ನು ಕಿತ್ತು ಅದರಲ್ಲಿರುವ ಜೇನು ತುಪ್ಪಕ್ಕೆ ಸಕ್ಕರೆ, ಬೆಲ್ಲ ಮಿಶ್ರಿತದ ಪಾಕವನ್ನು ಸೇರಿಸಿ ವರ್ತಕರಿಗೆ ಮಾರಾಟಕ್ಕಾಗಿ ನೀಡಿ ಹಣ ಪಡೆದುಕೊಂಡು ಹೋಗಿರುವ ಹೊರ ರಾಜ್ಯದ ಕೆಲ ವ್ಯಕ್ತಿಗಳು ಪುನಃ ಇಂತಹ ವಂಚನೆ ಮಾಡಲು ಬಂದಾಗ ಸಿಕ್ಕಿಬಿದ್ದಿದ್ದಾರೆ.

ಹೊರ ರಾಜ್ಯಗಳಿಂದ ಬಂದಿರುವ ಕೆಲ ವ್ಯಕ್ತಿಗಳು ಬಾಳೆಹೊನ್ನೂರು ವ್ಯಾಪ್ತಿಯಲ್ಲಿರುವ ದೊಡ್ಡ ಕಟ್ಟಡದಲ್ಲಿ ಕಟ್ಟಿರುವ ಹೆಜ್ಜೇನು ಗೂಡುಗಳನ್ನು ಕಿತ್ತು ಅದರಲ್ಲಿ ತುಪ್ಪವನ್ನು ಕೆಲ ದಿನಗಳ ಹಿಂದೆ ಸಂಗ್ರಹಿಸಿದ್ದು, ಈ ತುಪ್ಪವನ್ನು ಸ್ಥಳೀಯವಾಗಿಯೇ ಅಗತ್ಯವುಳ್ಳ ವರ್ತಕರಿಗೆ ಹತ್ತಾರು ಕೆಜಿಗಳಷ್ಟು ನೀಡಿ ಸಾವಿರಾರು ರೂಪಾಯಿ ಹಣವನ್ನು ಪಡೆದು ಸ್ಥಳದಿಂದ ತೆರಳಿದ್ದಾರೆ. ಜೇನುತುಪ್ಪ ಪಡೆದ ವರ್ತಕರು ಅದು ಶುದ್ಧ ಜೇನು ತುಪ್ಪವೋ? ಕಲಬೆರಕೆಯೋ ಎಂದು ಪರೀಕ್ಷಿಸಿಲ್ಲ.

ಜೇನು ತುಪ್ಪ ನೀಡಿ ತೆರಳಿದ ಕೆಲ ದಿನಗಳ ಬಳಿಕ ಪುನಃ ಪಟ್ಟಣಕ್ಕೆ ಬೇರೆ ಕಟ್ಟಡಗಳಲ್ಲಿ ಇದ್ದ ಜೇನು ಗೂಡುಗಳನ್ನು ಕೀಳಲು ಇದೇ ತಂಡ ಬಂದಿದ್ದು, ಪಟ್ಟಣದ ಕಟ್ಟಡವೊಂದರಲ್ಲಿ ಜೇನು ಗೂಡುಗಳನ್ನು ಕಿತ್ತು ಅದರಲ್ಲಿನ ತುಪ್ಪ ತೆಗೆದಿದ್ದಾರೆ. ತುಪ್ಪ ತೆಗೆದು ಕೆಳಗಿಳಿದ ಬಳಿಕ ಶುದ್ಧ ಜೇನು ತುಪ್ಪಕ್ಕೆ ಬೇರೆ ಬಕೆಟ್‌ಗಳಲ್ಲಿ ವಂಚಕರು ತುಂಬಿಸಿ ತಂದಿದ್ದ ಸಕ್ಕರೆ, ಬೆಲ್ಲದ ಪಾಕದ ಮಿಶ್ರಣವನ್ನು ಬೆರೆಸುತ್ತಿದ್ದು, ಇದನ್ನು ಸ್ಥಳೀಯರು ಗಮನಿಸಿದ್ದಾರೆ.

ಕೂಡಲೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಹಿಂದೆ ಜೇನು ತುಪ್ಪ ಖರೀದಿಸಿದ್ದ ಅಂಗಡಿ ಮಾಲೀಕರಿಗೆ ತಿಳಿಸಿದ್ದಾರೆ. ಆಗ ಅವರು ಖರೀದಿಸಿದ್ದ ಜೇನು ತುಪ್ಪವನ್ನು ಪರಿಶೀಲಿಸಿದ್ದಾಗ ಕ್ಯಾನ್‌ಗಳಲ್ಲಿದ್ದ ಜೇನು ತುಪ್ಪವು ಕಲಬೆರಕೆಯಾಗಿರುವುದು ಕಂಡುಬಂದಿದೆ.

ಕೂಡಲೇ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು ವಿವಿಧ ಹೊರ ರಾಜ್ಯದಿಂದ ಜೇನು ತುಪ್ಪ ತೆಗೆಯಲು ಬಂದಿದ್ದ ವ್ಯಕ್ತಿಗಳನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ಮೋಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಬಳಿಕ ಈ ಹಿಂದೆ ವಂಚಿಸಿದ್ದ ವರ್ತಕರಿಗೆ ನೀಡಿದ್ದ ಕಲಬೆರಕೆ ಜೇನು ತುಪ್ಪ ನೀಡಿ ಮೋಸ ಮಾಡಿದ್ದ ಹಿನ್ನೆಲೆಯಲ್ಲಿ ಸ್ವಲ್ಪ ಹಣವನ್ನು ವಾಪಾಸ್ಸು ನೀಡಿದ್ದಾರೆ. ಪೊಲೀಸರು ಹೊರ ರಾಜ್ಯದ ವಂಚಕ ವ್ಯಕ್ತಿಗಳಿಗೆ ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಹೊರ ರಾಜ್ಯದ ಕೆಲ ವ್ಯಕ್ತಿಗಳು ಬಾಳೆಹೊನ್ನೂರು ಮಾತ್ರವಲ್ಲದೇ ಚಿಕ್ಕಮಗಳೂರು, ಶಿವಮೊಗ್ಗ, ಕೊಪ್ಪ, ಶೃಂಗೇರಿ, ಆಲ್ದೂರು, ಎನ್.ಆರ್.ಪುರ ಮುಂತಾದ ಭಾಗಗಳಲ್ಲೂ ಇದೇ ಮಾದರಿಯಲ್ಲಿ ಜೇನು ಗೂಡುಗಳನ್ನು ಕಿತ್ತು ಕೊಡುವ ನೆಪದಲ್ಲಿ ಇದೇ ರೀತಿ ಕಲಬೆರಕೆ ಜೇನು ತುಪ್ಪ ನೀಡಿ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಅಂಗಡಿಗಳ ವರ್ತಕರು, ಸಾರ್ವಜನಿಕರು ಹೊರ ರಾಜ್ಯದ ಇಂತಹ ವ್ಯಕ್ತಿಗಳಿಂದ ಜೇನು ತುಪ್ಪ ಖರೀದಿಸುವ ಮುನ್ನ ಪರಿಶೀಲಿಸಿ ಖರೀದಿಸಬೇಕು ಅಥವಾ ಸ್ಥಳೀಯ ಗ್ರಾಮೀಣ ಜನರಿಂದಲೇ ಶುದ್ಧ ಜೇನು ತುಪ್ಪವನ್ನು ಖರೀದಿಸಬೇಕು ಎಂದು ವಂಚನೆಗೊಳಗಾದ ಅಂಗಡಿ ಮಾಲೀಕ ಹೇಳಿದ್ದಾರೆ.



RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!