SKP Constructions ಹಾಗೂ Borewells ಸಂಸ್ಥೆಯ ಮಾಲೀಕನೇ ಈ ದಸ್ತಗೀರ್! ಈ ಇಬ್ಬರು ಸೇರಿಕೊಂಡು ಸದ್ಯ 14 ಫೇಕ್ Stamp paper ಮುದ್ರಿಸಿರೋದು ಪತ್ತೆಯಾಗಿವೆ. ದಿನಾಂಕ 25.11.2024ರಂದು ಮುದ್ರಿಸಿರುವ IN-KA76845429815984W ನಂಬರಿನ ಛಾಪ ಕಾಗದವೂ 6 ಬಾರಿ ಪುನಾರವರ್ತನೆಯಾಗಿದ್ದು ಕಂಡುಬಂದಿದೆ. ಇನ್ನು 28.01.2025 ರಂದು ಮುದ್ರಿಸಿರುವ IN-KA35322561916311X ನಂಬರಿನ ಛಾಪ ಕಾಗದವು ಕೂಡ 6 ಬಾರಿ ಪುನರಾವರ್ತನೆ ಆಗಿದೆ. ಅಲ್ಲದೇ 28.05.2025ರಂದು ಮುದ್ರಿಸಿರುವ ಅದೇ ನಂಬರಿನ ಛಾಪ ಕಾಗದವೂ 2 ಬಾರಿ ಪುನರಾವರ್ತನೆ ಆಗಿದೆ. ಒಟ್ಟು 14 ನಕಲಿ Stamp paper ಗಳನ್ನ ಮುದ್ರಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಆರೋಪಿಗಳು.
ಜೆಜೆಎಂ ಯೋಜನೆಯಲ್ಲಿ ಅಕ್ರಮ: ಮೊದಲು ಧ್ವನಿ ಎತ್ತಿದ್ದೇ ಡಿ.ಎನ್. ಜೀವರಾಜ್
ಹೌದು.. 2024ರಿಂದ 2026ರವರೆಗೆ ಈ ರೀತಿ ಜೆಜೆಎಂ ಎಂಬ ಗುಮ್ಮ ತೋರಿಸಿ ಹಣ ದೋಚುವ ಕಾರ್ಯಕ್ರಮ ಎಗ್ಗಿಲದೇ ನಡೆದುಕೊಂಡು ಬರುತ್ತಿತ್ತು. ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಶುದ್ಧವಾದ ನೀರು ಸಿಗಬೇಕು ಎಂಬ ಆಶಯದೊಂದಿಗೆ ಶುರುವಾಗಿರುವ ಯೋಜನೆ ಇದಾಗಿದೆ. ಆದರೆ ಮೂಲ ಆಶಯವನ್ನ ಮರೆತ ಅಧಿಕಾರಿಗಳು, ಮಧ್ಯವರ್ತಿಗಳು, ಗುತ್ತಿಗೆದಾರರು ಯೋಜನೆಯಲ್ಲಿ ಎಷ್ಟು ಹಣ ಹೊಡೆಯಬಹುದು, ಹೇಗೆಲ್ಲಾ ಲಪಟಾಯಿಸಬಹುದು ಎಂದು ತಲೆ ಕೆಡಿಸಿಕೊಂಡು, ಪಕ್ಕಾ ಯೋಚನೆ ರೂಪಿಸಿ, ಅದರಂತೆ ಸರ್ಕಾರಕ್ಕೆ ವಂಚಿಸಲು ಮುಂದಾದರು.

ಅಕ್ರಮದ ವಾಸನೆಯನ್ನ ಗ್ರಹಿಸಿದ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್. ಜೀವರಾಜ್, ಶೃಂಗೇರಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಜೆಜೆಎಂ ಯೋಜನೆಯ ಅನುಷ್ಠಾನದಲ್ಲಿ ಹಣ ದುರುಪಯೋಗ ಆಗಿದೆ. ಕೊಳವೆ ಬಾವಿಗಳನ್ನ ಕೊರೆಸದೆಯೇ ಹಣ ನುಂಗಿದ್ದಾರೆ. ನಕಲಿ ಛಾಪಾ ಕಾಗದಗಳನ್ನ ಮುದ್ರಿಸಿದ್ದಾರೆ. ಮಾಡಿರೋ ಕೆಲವೇ ಕೆಲವು ಬೊರ್ ವೇಲ್ ಗಳನ್ನೂ ಸರಿಯಾದ ರೀತಿಯಲ್ಲಿ ಮಾಡಿಲ್ಲ. ಇದೊಂದು ಹಣ ಹೊಡೆಯುವ ಕಾರ್ಯಕ್ರಮ ಅಂತಾ ಮಾರ್ಚ್ 4, 2026ರಂದು ದಾಖಲೆ ಸಮೇತ ಸುದ್ದಿಗೋಷ್ಠಿ ಮಾಡಿದ್ರು. ಆ ಮೂಲಕ ಜೆಜೆಎಂ ಯೋಜನೆ ಹೇಗೆ ಹಳ್ಳ ಹಿಡಿಯುತ್ತಾ ಇದೆ ಎಂದು ಗೋಷ್ಠಿಯಲ್ಲಿ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಇಷ್ಟೆಲ್ಲಾ ನಡೀತಾ ಇದ್ರೂ ಅಧಿಕಾರಿಗಳು, ಜನಪ್ರತಿನಿಧಿಗಳು ಯಾಕೆ ಸೈಲೆಂಟ್ ಆಗಿದ್ದಾರೆ ಅಂತಾನೂ ಪ್ರಶ್ನೆ ಮಾಡಿದ್ದರು.
ಜೀವರಾಜ್ ದಾಖಲೆ ಇಡುತ್ತಲೇ ನಿದ್ದೆಯಿಂದ ಎದ್ದ ಅಧಿಕಾರಿಗಳು, ಮೂರು ತಿಂಗಳ ಬಳಿಕ ಮೀನಾಮೇಷ ಎಣಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಯಾವಾಗ ಡಿ.ಎನ್. ಜೀವರಾಜ್, ದಾಖಲೆ ಸಮೇತ ಸುದ್ದಿಗೋಷ್ಠಿ ಮಾಡಿದ್ರೋ, ಆಗ ಅಧಿಕಾರಿಗಳು ಇಂಗು ತಿಂದ ಮಂಗನಂತಾದರು. ಇನ್ನು ಸುಮ್ಮನೆ ಇದ್ರೆ ತಮ್ಮ ತಲೆದಂಡ ಪಕ್ಕಾ ಎಂದು ಮಾರ್ಚ್ 26ರಂದು ನಡೆದ ಕೆಡಿಪಿ ಸಭೆಯಲ್ಲಿ ಅಕ್ರಮ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತಾ ನಿರ್ಧಾರ ಕೈಗೊಳ್ಳಲಾಯ್ತು.
ಸದ್ಯ 14 ಛಾಫಾಕಾಗದಗಳನ್ನ ನಕಲಿ ಮಾಡಿ ಹಣ ಕಬಳಿಸಿದ್ದಾರೆ ಅಂತಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸುನೀಲ್ ಎಂಬುವವರು ಎನ್.ಆರ್. ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಪರ್ಯಾಸ ಅಂದ್ರೆ, ಅಷ್ಟೆಲ್ಲಾ ಅಕ್ರಮ ಆಗ್ತಿದ್ರೂ ಯಾವ ಅಧಿಕಾರಿಗೂ ಅಕ್ರಮದ ಕಿಂಚಿತ್ ವಾಸನೆತೈ ಬಡಿದಿಲ್ಲ ಅಂದರೆ ಏನರ್ಥ..? ಜನಪ್ರತಿನಿಧಿಗಳು ಏನ್ ಮಾಡ್ತಿದ್ರು… ಅನ್ನೋ ಸಾಮಾನ್ಯ ಪ್ರಶ್ನೆ ಎಲ್ಲರಿಗೂ ಮೂಡುತ್ತೆ!
ಮಾರ್ಚ್ 4ಕ್ಕೆ ಜೀವರಾಜ್ ಅವರು ಸುದ್ದಿಗೋಷ್ಠಿ ಮಾಡಿದಾಗ, ಮಾರ್ಚ್ 26ಕ್ಕೆ ಕೆಡಿಪಿ ಸಭೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗ್ಬೇಕು ಅಂತಾ ನಿರ್ಣಯ ಆಗುತ್ತೆ. ಆದರೂ ಇಷ್ಟು ತಡವಾಗಿ ಕ್ರಮಕ್ಕೆ ಮುಂದಾಗಿರೋದು ಜೂನ್ ತಿಂಗಳ ಮೊದಲ ವಾರದಲ್ಲಿ. ಇಲ್ಲಿ ಯಾರನ್ನೋ ರಕ್ಷಿಸುವ ಕೆಲಸ ಆಗ್ತಿದೆ.. ಇನ್ಯಾರನ್ನೋ ಒಲೈಸುವ ಕೆಲಸ ಆಗ್ತಿದೆ. ಇದನ್ನ ಜನ ನೋಡುತ್ತಲೇ ಇದ್ದಾರೆ.
ಒಟ್ಟಿನಲ್ಲಿ ಜನರ ದುಡ್ಡನ್ನ ಹೇಗೆ ಬೇಕಾದ್ರೂ ‘ಜಲ’ ಜೀವನ್ ಎಂಬ ಸದುದ್ದೇಶದ ಯೋಜನೆಯಲ್ಲಿ ನುಂಗಿ ‘ನೀರು’ ಕುಡಿಯಬಹುದು ಅನ್ನೋದನ್ನ ಶೃಂಗೇರಿ ಕ್ಷೇತ್ರದ ಕಳ್ಳ ಅಧಿಕಾರಿಗಳು, ಗುತ್ತಿಗೆದಾರರು, ಒಂದಷ್ಟು ಜನ ಖದೀಮರು ತೋರಿಸಿಕೊಟ್ಟಿದ್ದಾರೆ. ಈ ಅಕ್ರಮದಿಂದ ಒಂದಷ್ಟು ಜನರು ಬಚಾವಾಗಿದ್ದಾರೆ, ಅದಕ್ಕಾಗಿಯೇ ಒಂದಷ್ಟು ಸಮಯವನ್ನ ತೆಗೆದುಕೊಂಡು ಲೇಟಾಗಿ ‘ಕ್ರಮ’ ಅನ್ನುವ ಹಂತಕ್ಕೆ ಬಂದಿದ್ದಾರೆ.
ಏನೇ ಆಗಲಿ, ಸಿಕ್ಕಿಹಾಕಿಕೊಂಡಿರೋ ಅದ್ಯಾರೋ ದಸ್ತಗೀರ್.. ಇನ್ಯಾವುದೋ ಐರಾ ಡಿಜಿಟಲ್ ಅನ್ನೋ ಸಂಸ್ಥೆಯ ಮೇಲೆ ಅದ್ಯಾವ ಕ್ರಮ ತೆಗೆದುಕೊಳ್ತಾರೆ ಅನ್ನೋದನ್ನ ಕಾದು ನೋಡೋಣ..!
ವರದಿ: ಪ್ರಶಾಂತ್ ಮೂಡ್ಗೆರೆ
