ಶೃಂಗೇರಿ ವಿಧಾನಸಭಾ ಚುನಾವಣೆಯ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಮುಖಂಡ ಡಿ.ಎನ್. ಜೀವರಾಜ್ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಅವರ ವಿರುದ್ಧ ಮತಗಳನ್ನು ತಿರುಚಿದ ಆರೋಪದ ಮೇಲೆ ದೂರು ನೀಡಿದ ಕಾಂಗ್ರೆಸ್ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಅಂಚೆ ಮತಗಳ ಮರು ಎಣಿಕೆ ವೇಳೆ ಮತ ಪತ್ರಗಳನ್ನು ತಿರುಚಿದ ಆರೋಪ ಸಂಬಂಧ ಕಾಂಗ್ರೆಸ್ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ನೀಡಿದ ದೂರು ಆಧರಿಸಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಡಿ.ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ದೂರುದಾರರಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ.
ವಿಚಾರಣೆ ವೇಳೆ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರ ಮೇಲಿನ ಆರೋಪವೇನು? ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ದೂರುದಾರ ಪರ ವಕೀಲರು, ಮತಪತ್ರಗಳನ್ನು ತಿರುಚಲಾಗಿದೆ ಎಂದರು. ಆಗ ನ್ಯಾಯಪೀಠ, ಮತದಾನದ ಬಳಿಕ ಮತಪತ್ರಗಳು ಯಾರ ವಶದಲ್ಲಿತ್ತು? ಎಂದು ಕೇಳಿತು. ಇದಕ್ಕೆ ವಕೀಲರು, ಚುನಾವಣಾ ಆಯೋಗದ ವಶದಲ್ಲಿ ಎಂದರು.
ಅದಕ್ಕೆ ನ್ಯಾಯಪೀಠ, ಮತಪತ್ರ ಚುನಾವಣಾ ಆಯೋಗದ ವಶದಲ್ಲಿರಬೇಕಾದರೆ, ಅವುಗಳನ್ನ ಅರ್ಜಿದಾರರು ತಿದ್ದಲು ಹೇಗೆ ಸಾಧ್ಯ? ಚುನಾವಣಾ ಆಯೋಗವು ಹಾಕಿದ್ದ ಬೀಗವನ್ನು ಒಡೆದು ಮತಗಳನ್ನು ತಿದ್ದುಪಡಿ ಮಾಡಿ ಬಂದರೇ?, ಅಂದರೆ, ಚುನಾವಣಾ ಆಯೋಗದ ಭದ್ರತೆಯು ಉಪಯೋಗವಿಲ್ಲ ಎನ್ನುತ್ತೀರಾ? ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು.
ನಂತರ ಅರ್ಜಿದಾರರ ವಿರುದ್ಧದ ಎಫ್ಐಆರ್ಗೆ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಜು.3ರವರೆಗೆ ವಿಸ್ತರಿಸಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ : 2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 1,811 ಅಂಚೆ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್ನ ರಾಜೇಗೌಡ ಅವರು 201 ಮತಗಳಿಂದ ವಿಜೇತರಾಗಿದ್ದರು. ಬಳಿಕ ರಾಜೇಗೌಡರ ಆಯ್ಕೆ ಪ್ರಶ್ನಿಸಿ ಜೀವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಿರಸ್ಕೃತವಾಗಿರುವ 279 ಅಂಚೆ ಮತಗಳನ್ನು ಪರಿಶೀಲಿಸಿ ವಿಜೇತರನ್ನು ಘೋಷಿಸುವಂತೆ 2026ರ ಏಪ್ರಿಲ್ 6ರಂದು ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ 2026ರ ಮೇ 2-3ರಂದು ಚುನಾವಣಾಧಿಕಾರಿ ನ್ಯಾಯಾಲಯದ ನಿರ್ದೇಶನದ ಅನುಸಾರ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ರಾಜೇಗೌಡರ ವಿರುದ್ಧ ಜೀವರಾಜ್ ವಿಜೇತರು ಎಂದು ಫಾರ್ಮ್ 21C ಪತ್ರ ನೀಡಿದ್ದರು.
ಈ ಮಧ್ಯೆ 2026ರ ಮೇ 3ರಂದು ಮತ ಎಣಿಕೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಏಜೆಂಟ್ ಸುಧೀರ್ ಕುಮಾರ್ ಮುರೋಳ್ಳಿ ಅವರು ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿ, 2023ರ ಮೇ 13ರಂದು ಮತ ಎಣಿಕೆ ಮುಗಿದ ಬಳಿಕ ದೇವರಾಜ್, ಹಿಂದಿನ ಚುನಾವಣಾಧಿಕಾರಿ ವೇದಮೂರ್ತಿ ಮತ್ತು ಚಿಕ್ಕಮಗಳೂರಿನ ಅಂದಿನ ಜಿಲ್ಲಾಧಿಕಾರಿ ರಮೇಶ್ ಅವರು ಸಂಚು ರೂಪಿಸಿ ಮತ ಪೆಟ್ಟಿಗೆಗಳ ಸೀಲು ತೆಗೆದು ರಾಜೇಗೌಡರಿಗೆ ಬಿದ್ದಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.
