ಮೂಡಿಗೆರೆ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಕ್ಕೆ ಸೇರಿದ ಬಿಲ್ಲವ ಸಮುದಾಯವನ್ನು ಗುರಿಯಾಗಿಸಿಕೊಂಡು, ಅನಿತಾ ಕಾಸರಗೋಡು ಎಂಬ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಹರಿಬಿಡುತ್ತಿರುವುದು ತೀವ್ರ ಖಂಡನೀಯ ಎಂದು ಚಿಕ್ಕಮಗಳೂರು ಜಿಲ್ಲಾ ಒಕ್ಕೂಟದ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ತತ್ವಾದರ್ಶಗಳನ್ನು ಅನುಸರಿಸಿಕೊಂಡು ಬಂದಿರುವ ಬಿಲ್ಲವ ಸಮುದಾಯದ ಬಗ್ಗೆ ಕೀಳುಮಟ್ಟದ ಪದಗಳನ್ನು ಬಳಸಿ ಸಮಾಜದ ಘನತೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿರುವುದು ಸಮುದಾಯದ ಭಾವನೆಗಳಿಗೆ ಗಂಭೀರ ನೋವುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದರೂ, ಈವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಬಿಲ್ಲವ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಮಾಜಗಳ ನಡುವೆ ದ್ವೇಷ ಮತ್ತು ವೈಮನಸ್ಸು ಸೃಷ್ಟಿಸುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳಾದ ಶಾಸಕರು ಮತ್ತು ಸಂಸದರು ಸಾರ್ವಜನಿಕವಾಗಿ ತಮ್ಮ ನಿಲುವು ವ್ಯಕ್ತಪಡಿಸಿ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಸಮಾಜದ ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಕೃತ್ಯಗಳ ವಿರುದ್ಧ ಜನಪ್ರತಿನಿಧಿಗಳು ಮೌನ ವಹಿಸುವುದು ಜನರಲ್ಲಿ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ ರಾಜ್ಯದ ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಅನಿತಾ ಕಾಸರಗೋಡು ವಿರುದ್ಧ ಕಾನೂನಿನ ಅನ್ವಯ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ನ್ಯಾಯಸಮ್ಮತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮುಂದುವರಿದರೆ, ರಾಜ್ಯದಾದ್ಯಂತ ಬಿಲ್ಲವ ಸಂಘ-ಸಂಸ್ಥೆಗಳು ಹಾಗೂ ಸಮಾಜದ ಮುಖಂಡರು ಒಗ್ಗಟ್ಟಾಗಿ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟದ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಮುಂದಾಗಲಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾ ಒಕ್ಕೂಟದ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
