ಮೂಡಿಗೆರೆ: ಸಮಾಜದ ಒಳಿತಿಗಾಗಿ ದೂರದೃಷ್ಟಿಯುಳ್ಳ ಆಡಳಿತಗಾರ, ಸಮಾಜಮುಖಿ ನಾಯಕ ಹಾಗೂ ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೌಡರ ಜೀವನ ಚರಿತ್ರೆಯನ್ನು ಯುವ ಜನತೆ ತಿಳಿದುಕೊಳ್ಳಬೇಕೆಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಶನಿವಾರ ಪಟ್ಟಣದ ಬಿಜಿಎಸ್ ಒಕ್ಕಲಿಗರ ಸಂಘ ಪಿಯು ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಏರ್ಪಡಿಸಿದ್ದ 517ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರನ್ನು ಯೋಜಿತ ನಗರವನ್ನಾಗಿ ರೂಪಿಸಿದರು. ಕೆರೆಗಳು, ಉದ್ಯಾನಗಳು, ದೇವಾಲಯಗಳು, ರಸ್ತೆಗಳನ್ನು ನಿರ್ಮಿಸಿ ಜನರ ಬದುಕು ಸುಧಾರಿಸುವ ಕಾರ್ಯ ಮಾಡಿದ್ದರಿಂದ ಇಂದು ಅತಿವೃಷ್ಟಿ, ಅನಾವೃಷ್ಟಿ ಬಂದರೂ ಬೆಂಗಳೂರಿನ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಕೆಂಪೇಗೌಡ ಸೇರಿದಂತೆ ಈ ನಾಡಿನ ಹಿತಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮ ದಲ್ಲಿ ವಿಶೇಷ ಉಪನ್ಯಾಸ ನೀಡಿದ ಕೆಂಪೇಗೌಡ ಒಕ್ಕಲಿಗ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಬಕ್ಕಿ ಮಾತನಾಡಿ, ನಾಡಪ್ರಭು ಶ್ರೀ ಕೆಂಪೇಗೌಡ ಅವರು ಕರ್ನಾಟಕದ ಇತಿಹಾಸದಲ್ಲಿ ಅಜರಾಮರ ವ್ಯಕ್ತಿತ್ವವಾಗಿದ್ದು, ಬೆಂಗಳೂರಿನ ನಿರ್ಮಾಣ ಹಾಗೂ ಅಭಿವೃದ್ಧಿಗೆ ಅವರ ಕೊಡುಗೆ ಅನನ್ಯವಾಗಿದೆ ಎಂದರು
ಸುಮಾರು ಐದು ಶತಮಾನಗಳ ಹಿಂದೆ ಬೆಂಗಳೂರಿನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಅನೇಕ ಕೆರೆ-ಕಟ್ಟೆಗಳನ್ನು ನಿರ್ಮಿಸಿ, ಜನಪರ ಆಡಳಿತಕ್ಕೆ ಮಾದರಿಯಾಗಿದ್ದ ಕೆಂಪೇಗೌಡರು ಸಮಾಜಸೇವೆ ಹಾಗೂ ಬಡವರ ಏಳಿಗೆಗಾಗಿ ಶ್ರಮಿಸಿದ್ದರು.
ಶ್ರೀರಂಗಪಟ್ಟಣ, ಮೈಸೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಇಂದಿಗೂ ಸ್ಮರಣೀಯವಾಗಿದೆ ಎಂದು ಹೇಳಿದರು.
ಬುದ್ಧ, ಬಸವಣ್ಣ, ವಾಲ್ಮೀಕಿ ಸೇರಿದಂತೆ ಮಹನೀಯರು ಸಮಾಜಕ್ಕೆ ಹೊಸ ದಿಕ್ಕು ತೋರಿದವರು. ಜಾತಿ, ಧರ್ಮಗಳ ಭೇದವಿಲ್ಲದೆ ಅವರ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆಂಪೇಗೌಡರ ಇತಿಹಾಸ ಹಾಗೂ ಅವರ ವಂಶಸ್ಥರ ಸಾಧನೆಗಳನ್ನು ಸಮಗ್ರವಾಗಿ ತಿಳಿಯಲು ಶಾಸನಗಳು, ತಾಳೆಗರಿಗಳು ಮತ್ತು ಐತಿಹಾಸಿಕ ದಾಖಲೆಗಳ ಕುರಿತು ಆಳವಾದ ಅಧ್ಯಯನ ಅಗತ್ಯವಿದೆ ಎಂದು ಹೇಳಿದರು.
ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ಅಧ್ಯಕ್ಷ ಬ್ರಿಜೇಶ್ ಕಡಿದಾಳು ಮಾತನಾಡಿ, ಕೆಂಪೇಗೌಡರು ಉತ್ತಮ ಆಡಳಿತ, ನ್ಯಾಯ, ಪ್ರಾಮಾಣಿಕತೆ ಮತ್ತು ಜನಸೇವೆಗೆ ಹೆಚ್ಚಿನ ಮಹತ್ವ ನೀಡಿದರು. ಅವರ ಆಡಳಿತ ನಮಗೆ ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆ ಮತ್ತು ಜನಪರ ಆಡಳಿತದ ಮಹತ್ವವನ್ನು ತಿಳಿಸುತ್ತದೆ ಎಂದ ಅವರು, ನಮ್ಮ ಕೆಂಪೇಗೌಡ ಒಕ್ಕಲಿಗರ ವೇದಿಕೆಯಿಂದ ತಾಲೂಕಿನ ಜನರಿಗೆ ಅನುಕೂಲವಾಗಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕನಿಷ್ಟ 20 ಕಿ,ಮೀ ನಷ್ಟು ಇಂದನ ವೆಚ್ಚವನ್ನು ನಮ್ಮ ವೇದಿಕೆ ಬರಿಸುತ್ತದೆ. ಅದನ್ನು ತಾಲೂಕಿನ ಜನತೆ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರಕಾರಿ ಶಾಲೆ ವಿದ್ಯಾರ್ಥಿಗಳು ಹಾಗೂ ಆಂಬುಲೆನ್ಸ್ ಚಾಲಕನನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಆಂಬುಲೆನ್ಸ್ ಸಂಚಾರಕ್ಕೆ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಚಾಲನೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ವಿಎಸ್ ಶಾಲೆ ಟ್ರಸ್ಟಿಗಳಾದ ಪುಣ್ಯಮೂರ್ತಿ, ವೆಂಕಟೇಶ್, ಸಾಹಿತಿ ಹಳೆಕೋಟೆ ರಮೇಶ್, ಪ್ರಬಾರ ಬಿಇಒ ಹೇಮಂತ್‌ಚಂದ್ರ, ಕಾಲೇಜು ಪ್ರಾಂಶುಪಾಲ ಸಂದೇಶ್, ಡಾ. ಅನಂತಪದ್ಮನಾಭ, ಶಿರಸ್ತೆದಾರ ರಘು, ಮಂಜುನಾಥ್ ಬೆಟ್ಟಗೆರೆ, ಪುಟ್ಟಸ್ವಾಮಿಗೌಡ, ಅಣ್ಣೇಗೌಡ, ರಾಹುಲ್‌ಗೌಡ, ಶೃತಿ ಬ್ರಿಜೇಶ್ ಗೌಡ ಸೇರಿದಂತೆ ವಿದ್ಯಾರ್ಥಿಗಳು ಇದ್ದರು
ವರದಿ :ಪುನೀತ್ ಕಡಿದಾಳು
9483811948
