ಚಿಕ್ಕಮಗಳೂರು: ಮತದಾರರ ಪಟ್ಟಿಯನ್ನು ಅತ್ಯಂತ ನಿಖರವಾಗಿ ಹಾಗೂ ದೋಷ ರಹಿತವಾಗಿ ರೂಪಿಸುವ ನಿಟ್ಟಿನಲ್ಲಿ ಇದೇ ಜೂನ್ 30 ರಿಂದ ಜುಲೈ 29 ರವರೆಗೆ ಜಿಲ್ಲೆಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-ಎಸ್‍ಐಆರ್-2026 ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ತಿಳಿಸಿದರು.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಹನುಮಂತಪ್ಪ ವೃತ್ತದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಇದೇ ಜೂನ್ 30 ರಿಂದ ಜುಲೈ 29ರ ವರೆಗೆ ನಮ್ಮ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಖುದ್ದಾಗಿ ಭೇಟಿ ನೀಡಲಿದ್ದಾರೆ. 2025ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಮತದಾರರ ಮನೆಗೆ ತೆರಳಿ ಎರಡು “ಗಣತಿ ನಮೂನೆ” ನೀಡಲಿದ್ದಾರೆ. ಸಾರ್ವಜನಿಕರು ಈ ನಮೂನೆಯಲ್ಲಿ ತಮ್ಮ ನಿಖರ ಮಾಹಿತಿಯನ್ನು ಭರ್ತಿ ಮಾಡಬೇಕು ಎಂದು ತಿಳಿಸಿದರು.
ಗಣತಿ ನಮೂನೆಯನ್ನು ಭರ್ತಿ ಮಾಡುವ ಈ ಹಂತದಲ್ಲಿ ಸಾರ್ವಜನಿಕರು ಯಾವುದೇ ಪೂರಕ ದಾಖಲಾತಿಗಳನ್ನು ನೀಡುವ ಅಗತ್ಯವಿರುವುದಿಲ್ಲ. ಕೇವಲ ಮಾಹಿತಿಯನ್ನು ಭರ್ತಿ ಮಾಡಿ, ಅದರಲ್ಲಿ ಸಹಿ ಮಾಡಿ ಒಂದು ಪ್ರತಿಯನ್ನು ಬಿಎಲ್‍ಒಗೆ ಹಿಂದಿರುಗಿಸಬೇಕು. ಮತ್ತೊಂದು ಪ್ರತಿಯನ್ನು ನಿಮ್ಮ ಬಳಿಯೇ ಸುರಕ್ಷಿತವಾಗಿಟ್ಟುಕೊಳ್ಳಬೇಕು. ಈ ಮಹತ್ವದ ಎಸ್‍ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರ್ಹ ಮತದಾರನು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಮನವಿ ಮಾಡಿದರು.
ಯಾವುದಾದರೂ ಕುಟುಂಬದ ಸದಸ್ಯರು ಉದ್ಯೋಗ ಅಥವಾ ಇತರೆ ಕೆಲಸದ ನಿಮಿತ್ತ ತಾತ್ಕಾಲಿಕವಾಗಿ ಊರಿನಿಂದ ಹೊರಗಿದ್ದರೆ, ಮನೆಯಲ್ಲಿರುವ ಅವರ ಸಹೋದರ, ಸಹೋದರಿ ಅಥವಾ ಪೋಷಕರು ಆ ವ್ಯಕ್ತಿಯೊಂದಿಗಿನ ತಮ್ಮ ಸಂಬಂಧವನ್ನು ನಮೂದಿಸಿ, ಸಹಿ ಮಾಡುವ ಮೂಲಕ ಮಾಹಿತಿ ನೀಡಬಹುದಾಗಿದೆ.
ಸಾರ್ವಜನಿಕರಿಗೆ ಯಾವುದೇ ಗೊಂದಲ ಅಥವಾ ಮಾಹಿತಿ ಅಗತ್ಯವಿದ್ದಲ್ಲಿ ಬಿಎಲ್‍ಒಗಳನ್ನು ಸಂಪರ್ಕಿಸಬಹುದು. ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಚೇರಿಗಳಲ್ಲಿ ‘ಮತದಾರರ ಸಹಾಯ ಕೇಂದ್ರ’ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಬೂತ್ ಮಟ್ಟದ ಏಜೆಂಟರುಗಳು ಕೂಡ ಈ ನಿಟ್ಟಿನಲ್ಲಿ ನೆರವಾಗಲಿದ್ದಾರೆ ಎಂದು ತಿಳಿಸಿದರು.
ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಿಂದ ಪ್ರಾರಂಭವಾದ ಎಸ್‍ಐಆರ್ ಜಾಗೃತಿ ಜಾಥಾವು ನಗರದ ಪ್ರಮುಖ ರಸ್ತೆಗಳ ಮೂಲಕ ಆಜಾದ್ ಪಾರ್ಕ್‍ವರೆಗೂ ಜಾಥಾ ನಡೆಯಿತು.
ಜಾಥಾದಲ್ಲಿ ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.
