ಚಿಕ್ಕಮಗಳೂರು: ಅಪಘಾತದಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ಈಗ ರೋಚಕ ತಿರುವು ಪಡೆದುಕೊಂಡಿದ್ದು, ಹಣದ ವಿಷಯಕ್ಕಾಗಿ ಸ್ವತಃ ಸ್ನೇಹಿತನೇ ಕ್ರೂರವಾಗಿ ಕೊಲೆ ಮಾಡಿರುವುದನ್ನು ಸಖರಾಯಪಟ್ಟಣ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. ಹಾಸನ ಮೂಲದ ಯಶವಂತ (22) ಕೊಲೆಯಾದ ದುರದೃಷ್ಟಕರ ಯುವಕ.
ಘಟನೆಯ ಹಿನ್ನೆಲೆ:
ಕಳೆದ ಜೂನ್ 13ರ ರಾತ್ರಿ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಗೌಜ ಪೆಟ್ರೋಲ್ ಬಂಕ್ ಬಳಿ ಹಾಸನದ ಯಶವಂತ ತೀವ್ರ ಗಾ*ಯಗೊಂಡ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿ*ತ್ಸೆ ಫಲಿಸದೇ ಅವರು ಮೃ*ಪಟ್ಟಿದ್ದರು. ಮೇಲ್ನೋಟಕ್ಕೆ ಇದು ರಸ್ತೆ ಅಪಘಾ*ತವೆಂದು ತೋರಿದ್ದರಿಂದ ಕುಟುಂಬದವರು ಹಾಗೂ ಸಾರ್ವಜನಿಕರು ಅಪಘಾ*ತ ಎಂದೇ ಭಾವಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಸರಕು ಸಾಗಣೆ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.
ತನಿಖೆಗೆ ತಿರುವು ನೀಡಿದ ಚಾಲಕನ ಹೇಳಿಕೆ:
”ರಸ್ತೆಯಲ್ಲಿ ಈಗಾಗಲೇ ಬಿದ್ದಿದ್ದ ಯುವಕನ ಮೇಲೆ ವಾಹನ ಹರಿಯುವುದನ್ನು ತಪ್ಪಿಸಲು ಹೋಗಿ ನನ್ನ ವಾಹನ ಅಪಘಾ*ತಕ್ಕೀಡಾಯಿತು” ಎಂದು ಸರಕು ಸಾಗಣೆ ವಾಹನದ ಚಾಲಕ ನೀಡಿದ ಪ್ರಮುಖ ಹೇಳಿಕೆ ತನಿಖೆಯ ದಿಕ್ಕನ್ನೇ ಬದಲಿಸಿತು. ಈ ಅನುಮಾನದ ಆಧಾರದ ಮೇಲೆ ಕಡೂರು ಇನ್‌ಸ್ಪೆಕ್ಟರ್ ರಫೀಕ್ ಹಾಗೂ ಸಖರಾಯಪಟ್ಟಣ ಪಿಎಸ್‌ಐ ಪವನ್ ಅವರನ್ನೊಳಗೊಂಡ ತಂಡ ಸತ್ಯಾಸತ್ಯತೆ ಹೊರತರಲು ತೀವ್ರ ತನಿಖೆ ಆರಂಭಿಸಿತು.
ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಯ್ತು ಸಾಕ್ಷಿ:
ಘಟನೆ ನಡೆದ ದಿನ ಹಾಸನದ ಯಶವಂತ ತನ್ನ ತಾಯಿಗೆ ಕರೆ ಮಾಡಿ ಬೈಕ್ ಕಂತಿನ ಹಣ ಪಡೆಯಲು ಅಜ್ಜಂಪುರಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದರು. ತನಿಖೆ ವೇಳೆ ಅಜ್ಜಂಪುರದ ಪುನೀತ್ ಎಂಬುವರು ಕಂತಿನ ಹಣದ ಚೆಕ್ ನೀಡಿರುವುದಾಗಿ ಹಾಗೂ ಯಶವಂತನ ಜೊತೆ ಸಚಿನ್ ಎಂಬ ಸ್ನೇಹಿತನಿದ್ದನೆಂಬ ಮಾಹಿತಿ ನೀಡಿದರು.
ಬಳಿಕ ಪೊಲೀಸರು ಸಖರಾಯಪಟ್ಟಣ, ಚಿಕ್ಕಮಗಳೂರು ಮತ್ತು ಅಜ್ಜಂಪುರದ ವಿವಿಧೆಡೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ನೈಜ ಸಂಗತಿ ಬಯಲಾಯಿತು. ಯಶವಂತ ಹಾಗೂ ಸಚಿನ್ ಚಿಕ್ಕಮಗಳೂರಿನಲ್ಲಿ ಮದ್ಯ ಸೇವನೆ ಮಾಡಿದ್ದು, ಬಳಿಕ ಲಾಡ್ಜ್ ಒಂದರಲ್ಲಿ ಕೊಠಡಿಗಾಗಿ ಯತ್ನಿಸಿದ್ದು ಕಂಡುಬಂದಿದೆ. ಆದರೆ ಇಬ್ಬರೂ ವಿಪರೀತ ಪಾನಮತ್ತರಾಗಿದ್ದರಿಂದ ಲಾಡ್ಜ್ ಮಾಲೀಕರು ಕೊಠಡಿ ನೀಡಲು ನಿರಾಕರಿಸಿದ್ದರು.ತಡರಾತ್ರಿ ಇಬ್ಬರೂ ಸ್ಕೂಟರ್‌ನಲ್ಲಿ ಸಖರಾಯಪಟ್ಟಣದ ಕಡೆಗೆ ತೆರಳಿದ್ದರು. ಆದರೆ ಕೆಲ ಗಂಟೆಗಳ ನಂತರ ಅದೇ ಸ್ಕೂಟರ್‌ನಲ್ಲಿ ಸಚಿನ್ ಒಬ್ಬನೇ ವಾಪಸ್ ಬರುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಸ್ಕ್ರೂಡ್ರೈವರ್‌ನಿಂದ ತಿವಿದು ಉಸಿರು ತೆಗೆದ ಸ್ನೇಹಿತ:
ಸಿಸಿಟಿವಿ ಆಧಾರದ ಮೇಲೆ ಸಚಿನ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಭೀ*ಕರ ಸತ್ಯ ಹೊರಬಿದ್ದಿದೆ. ಸಚಿನ್‌ಗೆ ಹಾಸನದ ಯಶವಂತ ₹28 ಸಾವಿರ ಹಣ ಕೊಡಬೇಕಿತ್ತು. ಈ ಹಣದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು.
ರಾತ್ರಿ ರಸ್ತೆ ಮಧ್ಯೆ ಮೂತ್ರ ವಿಸರ್ಜನೆಗೆಂದು ಸ್ಕೂಟರ್ ನಿಲ್ಲಿಸಿದಾಗ ಮತ್ತೆ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆಕ್ರೋಶಗೊಂಡ ಸಚಿನ್, ಸ್ಕ್ರೂಡ್ರೈವರ್‌ನಿಂದ ಯಶವಂತಗೆ ತಿ*ವಿದು, ರಸ್ತೆಗೆ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಯಶವಂತನ ಬಳಿಯಿದ್ದ ಚೆಕ್ ಮತ್ತು ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಅಪಘಾತವೆಂದು ಬಿಂಬಿತವಾಗಿದ್ದ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ತನಿಖೆ ನಡೆಸಿ, ಹಾಸನ ಮೂಲದ ಯುವಕನ ಕೊಲೆಗಾರನನ್ನು ಬಂಧಿಸುವಲ್ಲಿ ಸಖರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
