ಬಣಕಲ್ : ಹಳ್ಳದ ನೀರು ನೇರವಾಗಿ ಬಾವಿಗೆ ಸೇರಿ, ಅದನ್ನು ದಾಸರಹಳ್ಳಿ ನಿವಾಸಿಗಳು ಕುಡಿಯುತ್ತಿರುವುದು ಅತ್ಯಂತ ನೋವಿನ ವಿಷಯ. ಸಂಸ್ಕರಿಸದ ಹಳ್ಳದ ನೀರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು, ಕೊಳಚೆ ಮತ್ತು ರಾಸಾಯನಿಕಗಳು ಇರುವ ಈ ನೀರನ್ನು ಕುಡಿಯುವುತ್ತಿರುವುದರಿಂದ ಕಾಲರಾ, ಭೇದಿ ಮತ್ತು ಟೈಫಾಯಿಡ್‌ನಂತಹ ಮಾರಕ ರೋಗಗಳಿಂದ ಬಳಲುತ್ತಿರುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆ ತಾಲ್ಲೂಕು ಬಣಕಲ್ ನ ದಾಸರಹಳ್ಳಿ ಗ್ರಾಮದಲ್ಲಿ ವರ್ಷಗಳಿಂದ ಕೊಳಚೆ ನೀರು ಸರಬರಾಜು ಆಗುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸದಿರುವುದೆ ವಿಪರ್ಯಾಸ ಎಂದಿದ್ದಾರೆ
ಮತ್ತಿಕಟ್ಟೆ ಭಾಗದಿಂದ ಬರುವ ಹಳ್ಳದ ನೀರು ನೇರವಾಗಿ ಬಾವಿಗೆ ಸೇರಿ ಅದೇ ನೀರು ನಲ್ಲಿಗಳ ಮುಖಾಂತರ ದಾಸರಹಳ್ಳಿ ಗ್ರಾಮದ ಪ್ರತಿ ಮನೆಗಳಿಗೆ ಬರುತ್ತಿವೆ. ನೀರಿನಲ್ಲಿ ಹುಳುಗಳು ಕೂಡ ತೇಲಿಬರುತ್ತಿರುತ್ತವೆ. ಪಲ್ಪರ್ ಸಮಯದಲ್ಲಿ ತೋಟಕ್ಕೆ ಸಿಂಪಡಿಸುವ ಕ್ರಿಮಿನಾಶಕಗಳು ಕೂಡ ನೀರಿನಲ್ಲಿ ಸೇರುತ್ತಿವೆ ಇಂತಹ ಕಲುಷಿತ ನೀರು ಕುಡಿಯುವುದರಿಂದ ಜನರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಬ್ಲಿಕ್ ಇಂಪ್ಯಾಕ್ಟ್ ಜೊತೆಗೆ ದಾಸರಹಳ್ಳಿ ಗ್ರಾಮಸ್ಥ ಪ್ರದೀಪ್ ಅವರು ಮಾತನಾಡಿ, ಬಣಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಈ ಗ್ರಾಮ ಪಂಚಾಯಿತಿ ಕಚೇರಿಗೆ ಕೂಗಳತೆ ದೂರದಲ್ಲಿಯೆ ಇದ್ದರೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿಲ್ಲ. ಹಲವು ಭಾರಿ ನಮ್ಮ ಭಾಗದ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರೂ ಕೂಡ 3 ವರ್ಷಗಳಿಂದ ಭರವಸೆ ನೀಡುತ್ತಾ ಬರುತ್ತಿದ್ದಾರೆಯೇ ಹೊರತು ಕ್ರಮಕ್ಕೆ ಮುಂದಾಗಿಲ್ಲ ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ಹಲವು ಭಾರಿ ತಂದಿದ್ದೇವೆ ಆದರೆ ಯಾರು ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು. ಹೀಗಾಗಿ ಮೇಲಾಧಿಕಾರಿಗಳು ಗಮನಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ ಎಂದರು.
ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಕೊಳಚೆ ನೀರು ಸರಬರಾಜಾಗುತ್ತಿದ್ದರೂ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಹೀಗೆ ಅಸಡ್ಡೆ ತೋರಿದರೆ ಗ್ರಾಮಸ್ಥರು ಖಾಲಿ ಕೊಡ ಮತ್ತು ಕೊಳಚೆ ನೀರು ತಂದು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ .
ಗ್ರಾಮದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಮೂಲ ಸೌಕರ್ಯಗಳ ಕೊರತೆ ಇದೆ. ಆದರೂ ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.
