ಶೃಂಗೇರಿ : ಕ್ಷೇತ್ರದ ಜೆಡಿಎಸ್ ವತಿಯಿಂದ ರಾಜ್ಯ ಸರ್ಕಾರವು ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧವಾ ವೇತನ ಪಡೆಯಲು ₹32,000 ಆದಾಯದ ಮಾನದಂಡವನ್ನು ನಿಗದಿಪಡಿಸಿರುವುದನ್ನು ಖಂಡಿಸಿ, ಕೊಪ್ಪ ತಾಲೂಕು ತಹಶೀಲ್ದಾರ್ ಕಚೇರಿ, ಶೃಂಗೇರಿ ತಾಲೂಕು ಕಚೇರಿ ಹಾಗೂ ನರಸಿಂಹರಾಜಪುರ ತಾಲೂಕು ಕಚೇರಿ ಮುಂಭಾಗದಲ್ಲಿ ಬೆಳಿಗ್ಗೆ 10:30 ಕ್ಕೆ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯ ಅಂಗವಾಗಿ ಭಾನುವಾರ ಕೊಪ್ಪದಲ್ಲಿರುವ ಶೃಂಗೇರಿ ಕ್ಷೇತ್ರ ಜೆಡಿಎಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್. ಶೆಟ್ಟಿ ಅವರು, ಸೋಮವಾರದಂದು ಪ್ರತಿಭಟನೆ ಶಾಂತಿಯುತ, ಶಿಸ್ತುಬದ್ಧ ಹಾಗೂ ಜನಪರವಾಗಿರಬೇಕು. ಸರ್ಕಾರಕ್ಕೆ ಜನರ ಸಂಕಷ್ಟವನ್ನು ಮನವರಿಕೆ ಮಾಡಿ, ಬಡವರು ಮತ್ತು ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸುವಂತೆ ಎಚ್ಚರಿಕೆ ನೀಡುವ ಹೋರಾಟವಾಗಬೇಕು ಎಂದು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್ ವಹಿಸಿದ್ದರು. ಕ್ಷೇತ್ರದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದರು.
