ಹಾಸನ: ಸಕಲೇಶಪುರ ತಾಲ್ಲೂಕಿನ ಎಡಕುಮಾರಿ ಹಾಗೂ ಶಿರವಾಗಿಲು ನಡುವೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಸಂಭವಿಸಿದ್ದ ಭೀಕರ ಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ, ರೈಲ್ವೆ ಇಲಾಖೆ ಯಶಸ್ವಿಯಾಗಿ ಮಣ್ಣು ತೆರವುಗೊಳಿಸಿದ್ದು ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಅಧಿಕೃತವಾಗಿ ಪುನರಾರಂಭಿಸಿದೆ.
ಶನಿವಾರ ರಾತ್ರಿ ಭಾರೀ ಮಳೆಯಿಂದಾಗಿ ಬೆಟ್ಟದ ಮಣ್ಣು ಮತ್ತು ಬಂಡೆಕಲ್ಲುಗಳು ರೈಲ್ವೆ ಹಳಿಯ ಮೇಲೆ ಕುಸಿದುಬಿದ್ದಿದ್ದವು. ಇದರಿಂದಾಗಿ ಬೆಂಗಳೂರಿನಿಂದ ಕರಾವಳಿ ಮತ್ತು ಕೇರಳ ಭಾಗವನ್ನು ಸಂಪರ್ಕಿಸುವ ಪ್ರಮುಖ ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಇಲಾಖೆಯ ತಾಂತ್ರಿಕ ತಂಡ ಮತ್ತು ಕಾರ್ಮಿಕರು, ಪ್ರತಿಕೂಲ ವಾತಾವರಣದ ನಡುವೆಯೂ ಸತತ ಮೂರು ದಿನಗಳ ಕಾಲ ಹಗಲಿರುಳು ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು. ಪ್ರಸ್ತುತ ಹಳಿಯ ಮೇಲಿದ್ದ ರಾಶಿಗಟ್ಟಲೆ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಮಾರ್ಗವನ್ನು ಸಂಚಾರಕ್ಕೆ ಯೋಗ್ಯಗೊಳಿಸಲಾಗಿದೆ.
ಗುಡ್ಡ ಕುಸಿದ ಜಾಗದಲ್ಲಿ ಹಳಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ 10 ಕಿಲೋಮೀಟರ್ ವೇಗ ನಿರ್ಬಂಧ ವಿಧಿಸಲಾಗಿದೆ. ಈ ನಿರ್ದಿಷ್ಟ ವ್ಯಾಪ್ತಿಯಲ್ಲಿ ರೈಲುಗಳು ನಿಧಾನಗತಿಯಲ್ಲಿ ಚಲಿಸಲಿವೆ.
