ಮೂಡಿಗೆರೆ: ರಾಜ್ಯ ಸರಕಾರ ನೀಡುತ್ತಿರುವ ಉತ್ತಮ ಆಡಳಿತದಿಂದಾಗಿ ಮುಂದಿನ ಚುನಾವಣೆಗೆ ಸಿದ್ಧರಾಗಲು ಬಿಜೆಪಿಯವರಿಗೆ ಭಯ ಶುರುವಾಗಿದೆ. ಹಾಗಾಗಿ ಪ್ರಮುಖ ವಿಚಾರಗಳೇ ಇಲ್ಲದೇ ಪಾದಯಾತ್ರೆ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೆಂದು ಅವರಿಗೆ ಗೊತ್ತಿಲ್ಲ. ರಾಜೇಂದ್ರ ಅವರು ಈಗಾಗಲೇ ರಾಜೀನಾಮ ಕೊಟ್ಟಾಗಿದೆ. ಭ್ರಷ್ಟಾಚಾರ, ಬರಗಾಲ, ರೈತರ ಸಮಸ್ಯೆ ಬಗ್ಗೆ ಪಾದಯಾತ್ರೆ ಎನ್ನುತ್ತಾರೆ. ಆದರೆ ಯಡಿಯೂರಪ್ಪ ಅವರೇ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದು ಗೊತ್ತಿಲ್ಲವೇ? ಬರಗಾಲ, ರೈತರ ಬಗ್ಗೆ ಅಧಿವೇಶನ ನಡೆದಾಗ ಅಲ್ಲಿ ಪ್ರಸ್ತಾಪಿಸಿ, ಉತ್ತರ ಪಡೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಬೀದಿ ರಂಪಾಟ ಮಾಡಿದರೆ ಪ್ರಯೋಜನವಾಗುವುದಿಲ್ಲ. ಈಗಾಗಲೇ ಬರಗಾಲ ನಿಯಂತ್ರಿಸಲು ಎಲ್ಲಾ ಸಚಿವರು ಹಾಗೂ ಉಸ್ತುವಾರಿ ಸಚಿವರು ಬರಪೀಡಿತ ಪ್ರದೇಶಗಳನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ಮೂಲಕ ಕೇಂದ್ರಕ್ಕೆ ವರದಿ ಸಲ್ಲಿಸುವ ಸಿದ್ಧತೆ ನಡೆದಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಮಲತಾಯಿ ಧೋರಣೆ ಮಾಡುತ್ತಿದೆ. ರಾಜ್ಯಕ್ಕೆ ಕೊಡಬೇಕಾದ ಅನುದಾನ ನೀಡುತ್ತಿಲ್ಲ. ಅದನ್ನು ನ್ಯಾಯಾಲಯದ ಮೂಲಕ ಪಡೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕೇಂದ್ರ ಸರಕಾರ ಕಳೆದ 12 ವರ್ಷದಲ್ಲಿ 22.ಲಕ್ಷ ಕೋಟಿ ರೂ ಬಂಡವಾಳಶಾಹಿಗಳ ಸಾಲ ಮನ್ನ ಮಾಡಿದೆ. ಆದರೆ ದೇಶದ ಬೆನ್ನೆಲುಬು ಆಗಿರುವ ರೈತರ ಸಾಲ ಮನ್ನ ಮಾಡಲು ಕೇವಲ 3.ಲಕ್ಷ ಕೋಟಿ ರೂ ಹಣ ನೀಡಲು ಕೇಂದ್ರ ಸರಕಾರ ಸತಾಯಿಸುತ್ತಿದೆ. ಅಲ್ಲದೇ ವಿರೋಧ ಪಕ್ಷದ ಪ್ರಭಲ ನಾಯಕರ ಮೇಲೆ ಮೋದಿ ಸರಕಾರ ನಿರಂತರವಾಗಿ ದಾಳಿ ನಡೆಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ನ್ನು ಸಂಪೂರ್ಣ ನಾಶಪಡಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲವೆಂದು ಹೇಳಿದರು.
ರಾಜ್ಯ ಸರಕಾರ ಮಹಿಳಾ ಶಾಸಕರನ್ನು ಕಡೆಗಣಿಸಿಲ್ಲ. ಮಹಿಳೆಯರ ಕೋಟ ಹಾಗಯೇ ಉಳಿಸಿಕೊಂಡಿದ್ದು, ಇನ್ನೊಂದು ವಾರದಲ್ಲಿ ಮಂತ್ರಿ ಸ್ಥಾನ ಭರ್ತಿಯಾಗಲಿದೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು. .
ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್ ಉಪಸ್ಥಿತರಿದ್ದರು.
