ಮೂಡಿಗೆರೆ : ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚೆಗೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಆಂತರಿಕ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹಾಗೂ ಹಾಸನ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್ ಅವರು ಶುಕ್ರವಾರ ಮೂಡಿಗೆರೆಗೆ ಆಗಮಿಸಿ ಪಕ್ಷದ ಎರಡೂ ಬಣಗಳ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಕ್ಷೇತ್ರದ ಕಾಂಗ್ರೆಸ್ ನಾಯಕರ ನಡುವಿನ ಒಳಜಗಳ ಈ ಹಿಂದೆ ರಾಜಧಾನಿ ಬೆಂಗಳೂರಿನವರೆಗೂ ತಲುಪಿ ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಶಾಸಕರ ಪರ ಹಾಗೂ ವಿರೋಧಿ ಬಣಗಳ ಮುಖಂಡರು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಪರಸ್ಪರ ಆರೋಪ–ಪ್ರತ್ಯಾರೋಪಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ಪಕ್ಷದ ವಿವಿಧ ಪ್ರಮುಖ ಹುದ್ದೆಗಳ ನೇಮಕಾತಿ ವಿಚಾರದಲ್ಲಿಯೂ ಎರಡೂ ಬಣಗಳ ನಡುವೆ ಅಸಮಾಧಾನ ಉಂಟಾಗಿ, ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಟರ ಸೂಚನೆಯಂತೆ ಮೂಡಿಗೆರೆಗೆ ಆಗಮಿಸಿದ ವಿನಯ್ ಕುಮಾರ್ ಸೊರಕೆ ಹಾಗೂ ಜಾವಗಲ್ ಮಂಜುನಾಥ್ ಅವರು ಆರಂಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರ ಬಣದೊಂದಿಗೆ ಸಭೆ ನಡೆಸಿದರು. ಬಳಿಕ ಶಾಸಕರ ಬಣದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು.
ಸಭೆಯಲ್ಲಿ ಎರಡೂ ಬಣಗಳ ಮುಖಂಡರು ತಮ್ಮ ತಮ್ಮ ಬೇಡಿಕೆ, ಅಹವಾಲು, ಆರೋಪ ಹಾಗೂ ಅಸಮಾಧಾನಗಳನ್ನು ನಾಯಕರ ಮುಂದಿಟ್ಟರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಸೊರಕೆ ಹಾಗೂ ಜಾವಗಲ್ ಮಂಜುನಾಥ್ ಅವರು, ಎಲ್ಲಾ ವಿಚಾರವನ್ನು ವರಿಷ್ಟರೊಂದಿಗೆ ಮಾತನಾಡಿ , ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅಲ್ಲದೇ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಪಾಲಿಸಬೇಕೆಂದು ಖಡಕ್ ವಾರ್ನಿಂಗ್ ಮಾಡಿ ಇಲ್ಲಿಂದ ತೆರಳಿದರೆಂದು ಕಾಂಗ್ರೆಸ್ ಮೂಲದಿಂದ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ ಮೂಡಿಗೆರೆ ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪಕ್ಷದ ವರಿಷ್ಟರು ಮುಂದಾಗಿರುವುದು ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ.
