ಬಾಳೆಹೊನ್ನೂರು: ಕಸ್ತೂರಿ ರಂಗನ್ ವರದಿ ಆಧಾರಿತ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಕೇಂದ್ರ ಸರ್ಕಾರ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ, ಮಲೆನಾಡು-ಕರಾವಳಿ ಭಾಗದ ಜನರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ 25 ಅಂಶಗಳ ಹಕ್ಕೊತ್ತಾಯಗಳ ಮನವಿ ಸಲ್ಲಿಸಿದೆ.
ಸೆ.19ರಂದು ಬಾಳೆಹೊನ್ನೂರಿನಲ್ಲಿ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಯಿತು.
🌳 ಕಸ್ತೂರಿ ರಂಗನ್ ವರದಿ, ಅರಣ್ಯ ಕಾಯ್ದೆ, ಪರಿಸರ ಸೂಕ್ಷ್ಮ ವಲಯ, ಅರಣ್ಯ ಹಕ್ಕು ಹಾಗೂ ಕಾಡುಪ್ರಾಣಿ-ಮಾನವ ಸಂಘರ್ಷ ಸೇರಿದಂತೆ ಮಲೆನಾಡಿನ ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಒಕ್ಕೂಟ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದೆ.
ಜನಾಭಿಪ್ರಾಯ ಪಡೆದು ESZ ಘೋಷಿಸಿ
ಕಸ್ತೂರಿ ರಂಗನ್ ಸಮಿತಿ ಮಲೆನಾಡಿನ ಭೌಗೋಳಿಕ ಪರಿಸ್ಥಿತಿ, ಜನವಸತಿ, ಕೃಷಿ ಹಾಗೂ ಸ್ಥಳೀಯರ ಜೀವನ ವಿಧಾನವನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಒಕ್ಕೂಟ ಆರೋಪಿಸಿದೆ.
ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೆ ಮುನ್ನ ಗ್ರಾಮ ಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ, ಸಮರ್ಪಕ ಭೌತಿಕ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದೆ.
ಕೇರಳ ಮಾದರಿಯಲ್ಲಿ ಕ್ರಮಕ್ಕೆ ಒತ್ತಾಯ
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಭೂಮಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರು ಹಾಗೂ ನೆಲವಾಸಿಗಳ ಭೂ ಮಂಜೂರಾತಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
50, 53, 57, 94ಸಿ, 94ಸಿಸಿ ಸೇರಿದಂತೆ ವಿವಿಧ ನಮೂನೆಗಳಡಿ ಬಾಕಿ ಇರುವ ಮಂಜೂರಾತಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಮನವಿ ಮಾಡಲಾಗಿದೆ.
🏠 ನಿವೇಶನ ರಹಿತರಿಗೆ ಜಮೀನು ನೀಡಿ
ಪಾರಂಪರಿಕ ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದ ದಾಖಲೆ ಹಾಗೂ ಕಾಲಮಿತಿಯನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸಲು ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ತರಬೇಕು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 15 ಎಕರೆ ಸರ್ಕಾರಿ ಜಮೀನು ಒದಗಿಸಿ ನಿವೇಶನ ರಹಿತರಿಗೆ ಬಡಾವಣೆ ನಿರ್ಮಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
🐘 ಕಾಡುಪ್ರಾಣಿ ದಾಳಿಗೆ ₹30 ಲಕ್ಷ ಪರಿಹಾರ..!
ಮಲೆನಾಡಿನಲ್ಲಿ ಹೆಚ್ಚುತ್ತಿರುವ ಮಾನವ-ಕಾಡುಪ್ರಾಣಿ ಸಂಘರ್ಷದ ಹಿನ್ನೆಲೆಯಲ್ಲಿ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಕನಿಷ್ಠ ₹30 ಲಕ್ಷ ಪರಿಹಾರ ನೀಡಬೇಕು. ಸಂದರ್ಭಾನುಸಾರ ಗರಿಷ್ಠ ₹50 ಲಕ್ಷದವರೆಗೆ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಮೃತರ ಕುಟುಂಬಕ್ಕೆ ನೀಡುವ ಮಾಸಿಕ ಪಿಂಚಣಿಯನ್ನು ₹20 ಸಾವಿರಕ್ಕೆ ಹೆಚ್ಚಿಸಬೇಕು. ಹಾವು ಕಡಿತದ ಪ್ರಕರಣಗಳನ್ನೂ ಪರಿಹಾರದ ವ್ಯಾಪ್ತಿಗೆ ತರಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಾಡುಪ್ರಾಣಿ ದಾಳಿಯಿಂದ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲು ಆಯ್ದ ಆಸ್ಪತ್ರೆಗಳಲ್ಲಿ ಅರಣ್ಯ ಅಥವಾ ವನ್ಯಜೀವಿ ಇಲಾಖೆಯ ಶಾಶ್ವತ ನಿಧಿ ಸ್ಥಾಪಿಸಬೇಕು.
ಅಂಗವೈಕಲ್ಯಕ್ಕೊಳಗಾದವರಿಗೆ ವೈಕಲ್ಯದ ಪ್ರಮಾಣ ಆಧರಿಸಿ ಪರಿಹಾರ ಹಾಗೂ ಶಾಶ್ವತ ಅಂಗವೈಕಲ್ಯ ಹೊಂದಿದವರಿಗೆ ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಮೃತರ ಕುಟುಂಬದ ಹತ್ತಿರದ ಸದಸ್ಯರಿಗೆ ಪ್ರಥಮ ದರ್ಜೆ ಗುಮಾಸ್ತ ಹುದ್ದೆಗಿಂತ ಕಡಿಮೆಯಿಲ್ಲದ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಬೇಡಿಕೆಯೂ ಇದೆ.
🐅 ಹುಲಿ ಯೋಜನೆ, ರಾಷ್ಟ್ರೀಯ ಉದ್ಯಾನ ವಿಸ್ತರಣೆಗೆ ವಿರೋಧ
ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಯೋಜನೆಗಳಿಂದ ಭೂಮಿ, ಮನೆ ಮತ್ತು ಕೃಷಿ ಜಮೀನು ಕಳೆದುಕೊಳ್ಳುವವರಿಗೆ ತ್ವರಿತ ಪರಿಹಾರ ನೀಡಬೇಕು.
ಮೌಲ್ಯಮಾಪನ ಮಾಡಿದ ಒಂದು ವರ್ಷದೊಳಗೆ ಪರಿಹಾರ ವಿತರಿಸಬೇಕು. ಮಾರ್ಗಸೂಚಿ ಬೆಲೆಯನ್ನು ನಾಲ್ಕು ಪಟ್ಟು ಹೆಚ್ಚಿಸಿ ಪರಿಹಾರ ನಿಗದಿಪಡಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಮಲೆನಾಡಿನ ಕೃಷಿ ವೈವಿಧ್ಯತೆಯನ್ನು ಪರಿಗಣಿಸಿ ಕಾಡುಪ್ರಾಣಿಗಳಿಂದ ಹಾನಿಗೊಳಗಾದ ಬೆಳೆಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು. ಪಶ್ಚಿಮಘಟ್ಟ ತಪ್ಪಲಿನ ಮಲೆನಾಡು ಪ್ರದೇಶವನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ಹುಲಿ ಯೋಜನೆ ಅಥವಾ ರಾಷ್ಟ್ರೀಯ ಉದ್ಯಾನ ವಿಸ್ತರಣೆಯಿಂದ ನೆಲವಾಸಿಗಳ ಸ್ಥಳಾಂತರಕ್ಕೆ ಕಾರಣವಾಗುವ ಪ್ರಸ್ತಾವನೆಗಳನ್ನು ಕೈಬಿಡಬೇಕು. ಈಗಿರುವ ಹುಲಿ ಯೋಜನೆ, ರಾಷ್ಟ್ರೀಯ ಉದ್ಯಾನ ಅಥವಾ ಮೀಸಲು ಅರಣ್ಯಗಳ ವ್ಯಾಪ್ತಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸಬಾರದು ಎಂದು ಒಕ್ಕೂಟ ಒತ್ತಾಯಿಸಿದೆ.
📢 ಮಲೆನಾಡು-ಕರಾವಳಿ ಜನರ ಸಮಸ್ಯೆಗಳ ಕುರಿತು ವಿಶೇಷ ಅಧಿವೇಶನ ನಡೆಸಿ ಸಮಗ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ.
ಒಕ್ಕೂಟದ ಪ್ರಧಾನ ಸಂಚಾಲಕ ಅನಿಲ್ ಹೊಸಕೊಪ್ಪ, ಖಜಾಂಚಿ ನಿಸಾರ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೊಳ್ಳಿ ಸೇರಿದಂತೆ ಪದಾಧಿಕಾರಿಗಳು ಮನವಿಗೆ ಸಹಿ ಮಾಡಿದ್ದಾರೆ.
