ಕೊಪ್ಪ : ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡು, ಖಾಸಗಿ ವಿಡಿಯೋ ಮುಂದಿಟ್ಟುಕೊಂಡು ಹಣಕ್ಕಾಗಿ ಪೀಡಿಸಿ ಬ್ಲ್ಯಾಕ್ಮೇಲ್ ಮಾಡಿದ ಪರಿಣಾಮ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಣಿಪಾಲದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ, ಜಯಪುರ ಸಮೀಪದ ಚೌಡಿಕಟ್ಟೆಯ ಮನೋಜ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ನಡುವೆ ಕಳಸ ತಾಲೂಕಿನ ಸುಂಕಸಲೆಯ ಅರುಣ್ ಎಂಬಾತ ಪರಿಚಯವಾಗಿ, ಆಕೆಯನ್ನು ಪುಸಲಾಯಿಸಿ ಮೊಬೈಲ್ ಸಂಖ್ಯೆ ಪಡೆದು ಉಜಿರೆಗೆ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ಆ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡಿದ್ದ ಆರೋಪಿ ಅರುಣ್, ತಾನು ಕೇಳಿದಾಗ ಹಣ ನೀಡದಿದ್ದರೆ ಖಾಸಗಿ ವಿಡಿಯೋಗಳನ್ನು ಕುಟುಂಬಸ್ಥರಿಗೆ ಕಳುಹಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ನಿರಂತರವಾಗಿ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಆರೋಪಿಗಳ ಕಿರುಕುಳ ಹಾಗೂ ಬ್ಲ್ಯಾಕ್ಮೇಲ್ನಿಂದ ತೀವ್ರವಾಗಿ ಮನನೊಂದ ಯುವತಿ ಸೆಪ್ಟೆಂಬರ್ 23ರಂದು ವಿಷ ಸೇವಿಸಿದ್ದು, ತೀವ ಅಸ್ವಸ್ಥಗೊಂಡಿದ್ದ ಆಕೆಯನ್ನು ಕೊಪ್ಪ ಮೂಡಿಗೆರೆ ಹಾಗೂ ಚಿಕ್ಕಮಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
