ಮೂಡಿಗೆರೆ: ಮಲೆನಾಡಿನಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ಪ್ರಕ್ರಿಯೆ ಸಾಮಾನ್ಯ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ತಲೆತಲಾಂತರಗಳಿಂದ ಭೂಮಿಯನ್ನು ನಂಬಿ ಬದುಕುತ್ತಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಆತಂಕ ಹಾಗೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕರ್ನಾಟಕ ಧ್ವನಿ ಸಂಘದ ತಾಲ್ಲೂಕು ಅಧ್ಯಕ್ಷ ಹೆಚ್.ಜಿ. ಜಯಕುಮಾರ್ ಹೇಳಿದರು.
ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಮಲೆನಾಡು ಭಾಗದಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯ ಗಡಿ ಗುರುತಿಸುವಿಕೆಯಲ್ಲಿ ದಶಕಗಳಿಂದಲೂ ಗೊಂದಲವಿದೆ. ಇದೀಗ ಜಂಟಿ ಸರ್ವೆ ಸಂದರ್ಭದಲ್ಲಿ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಾಗವನ್ನು ಅರಣ್ಯ ಭೂಮಿ ಎಂದು ಗುರುತಿಸಿ, ಒಕ್ಕಲೆಬ್ಬಿಸುವ ನೋಟಿಸ್ ನೀಡಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ರೈತರು ರಕ್ತಗಡಸು ಮಾಡಿ ಬೆಳೆಸಿರುವ ಅಡಿಕೆ, ಕಾಫಿ ಹಾಗೂ ಕಾಳುಮೆಣಸಿನ ತೋಟಗಳು ಅರಣ್ಯ ವ್ಯಾಪ್ತಿಗೆ ಬರುತ್ತವೆ ಎಂದು ಗುರುತಿಸಿದರೆ, ಅವರ ಜೀವನಾಧಾರವೇ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಂದಾಯ ಇಲಾಖೆಯಿಂದ ನೀಡಿರುವ ಹಕ್ಕುಪತ್ರಗಳು, ಫಾರಂ 50, 53, 57ರ ಅರ್ಜಿಗಳು ಹಾಗೂ ಪಹಣಿ ಸೇರಿದಂತೆ ದಾಖಲೆಗಳಿದ್ದರೂ, ಸರ್ವೆ ಸಂದರ್ಭದಲ್ಲಿ ಅವುಗಳಿಗೆ ಮಾನ್ಯತೆ ಸಿಗದಿರುವ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಬ್ರಿಟಿಷರ ಕಾಲದ ಅಥವಾ ಸ್ವಾತಂತ್ರ್ಯದ ಆರಂಭದ ಅವಧಿಯಲ್ಲಿನ ಸೆಕ್ಷನ್ 4 ಅಧಿಸೂಚನೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತುತ ಸರ್ವೆ ನಡೆಸುತ್ತಿರುವುದರಿಂದ ಹಲವು ವರ್ಷಗಳಿಂದ ಕಂದಾಯ ಭೂಮಿಯಾಗಿ ಬಳಕೆಯಲ್ಲಿರುವ ಜಾಗಗಳು ಅರಣ್ಯ ವ್ಯಾಪ್ತಿಗೆ ಸೇರುವ ಆತಂಕವಿದೆ. ಕಾನೂನುಗಳ ಸಂಕೀರ್ಣತೆಯಿಂದಾಗಿ ಅಧಿಕಾರಿಗಳು ಕೂಡ ರೈತರ ಪರವಾಗಿ ತೀರ್ಮಾನ ಕೈಗೊಳ್ಳಲು ಹಿಂಜರಿಯುವಂತಾಗಿದೆ ಎಂದು ಹೇಳಿದರು.
ಜಂಟಿ ಸರ್ವೆ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ರೈತರು ತಮ್ಮ ಜಮೀನಿನ ಗಡಿ ನಿಗದಿಪಡಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ಗಡಿ ಗುರುತಿಸುವಿಕೆ ಹೆಸರಿನಲ್ಲಿ ರೈತರನ್ನು ಶೋಷಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಭೂಮಿ ವಿವಾದದಲ್ಲಿದೆ ಅಥವಾ ಜಂಟಿ ಸರ್ವೆ ಬಾಕಿಯಿದೆ ಎಂಬ ಕಾರಣಕ್ಕೆ ಬ್ಯಾಂಕ್ ಸಾಲ ಪಡೆಯಲು ರೈತರಿಗೆ ತೊಂದರೆಯಾಗುತ್ತಿದೆ. ಇದರಿಂದ ರೈತರು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಪ್ರಮುಖ ಬೇಡಿಕೆಗಳು
ತಲೆತಲಾಂತರಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಶೀಲಿಸಿ ಯಾವುದೇ ಕಾರಣಕ್ಕೂ ಏಕಾಏಕಿ ಒಕ್ಕಲೆಬ್ಬಿಸಬಾರದು. ಸರ್ಕಾರ ಅಧಿಕೃತವಾಗಿ ನೀಡಿರುವ ಕಂದಾಯ ದಾಖಲೆಗಳು ಹಾಗೂ ಹಕ್ಕುಪತ್ರಗಳಿಗೆ ಮಾನ್ಯತೆ ನೀಡಬೇಕು. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿರುವ ಜನವಸತಿ ಹಾಗೂ ಕೃಷಿ ಭೂಮಿಯ ಗೊಂದಲವನ್ನು ಶಾಶ್ವತವಾಗಿ ನಿವಾರಿಸಬೇಕು ಎಂದು ಅವರು ಒತ್ತಾಯಿಸಿದರು.ಈ ಕುರಿತು ಪ್ರಭಾರ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಬಿ.ಹೆಚ್. ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಧ್ವನಿ ಸಂಘದ ಗೌರವಾಧ್ಯಕ್ಷ ಹಾಗೂ ಪತ್ರಕರ್ತ ರಾಘವೇಂದ್ರ ಕೆಸವಳಲು ಮಾತನಾಡಿ, “ಮೊದಲು ಜಂಟಿ ಸರ್ವೆ ನಡೆಸಿ ಅರಣ್ಯ ಇಲಾಖೆಗೆ ಸೇರಿದ ಜಾಗ ಯಾವುದು, ಕಂದಾಯ ಇಲಾಖೆಗೆ ಸೇರಿದ ಜಾಗ ಯಾವುದು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು. ದಶಕಗಳಿಂದ ಇರುವ ಗೊಂದಲವನ್ನು ನಿವಾರಿಸಿ ರೈತರ ಜಮೀನು ಉಳಿಸುವ ಪ್ರಯತ್ನ ನಡೆಯಬೇಕು” ಎಂದು ಒತ್ತಾಯಿಸಿದರು.
ಕಾಡು ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ ವಿರುದ್ಧ ಕ್ರಮ ಕೈಗೊಳ್ಳದೆ, ಸಣ್ಣ ರೈತರ ಮೇಲೆಯೇ ಕ್ರಮ ಕೈಗೊಳ್ಳುವುದು ಸರಿಯಲ್ಲ. ಕಳೆದೆರಡು ವರ್ಷಗಳಿಂದ ಕಂದಾಯ ಇಲಾಖೆಯಿಂದ ದಾಖಲೆಗಳು ಬಂದಿದ್ದರೂ ಎನ್‌ಒಸಿ ದೊರೆಯದೆ ರೈತರು ಪರದಾಡುತ್ತಿದ್ದಾರೆ. ಅಂತಹ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು ಬಾಕಿ ಇರುವ ಅನ್ಯಕ್ರಾಂತ ಅರ್ಜಿಗಳನ್ನೂ ಶೀಘ್ರ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸುದೈವ್ ಗುತ್ತಿ ಮಾತನಾಡಿ, ಮೂಡಿಗೆರೆಯಲ್ಲಿ ಕಳೆದ 10–12 ವರ್ಷಗಳಿಂದ ರೈತರು ಒಂದಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸಿ ರೈತರ ಜಮೀನಿನ ಗೊಂದಲವನ್ನು ನಿವಾರಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಪ್ರಭಾರ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಬಿ.ಹೆಚ್., ಈಗಾಗಲೇ ಕಳಸ ಭಾಗದಲ್ಲಿ ಜಂಟಿ ಸರ್ವೆ ಕಾರ್ಯ ಆರಂಭವಾಗಿದ್ದು, ಆದಷ್ಟು ಶೀಘ್ರದಲ್ಲಿ ಮೂಡಿಗೆರೆ ಭಾಗದಲ್ಲಿಯೂ ಸರ್ವೆ ಕಾರ್ಯ ಆರಂಭಿಸಲಾಗುವುದು. ರೈತರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಂಜುಶೆಟ್ಟಿ ಸಂಜು, ರಂಜಿತ್, ಭದ್ರೇಶ್ ಹಾಗೂ ಕರ್ನಾಟಕ ಧ್ವನಿ ಸಂಘದ ಖಜಾಂಚಿ ಮುತ್ತಿಗೆಪುರ ಸಾರ್ಥಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
