ಮೂಡಿಗೆರೆ: ಮುಂಬರುವ ಮಣಿಪುರ ರಾಜ್ಯದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಬಿ ಎಂ ಸಂದೀಪ್ ಬೆಟ್ಟಗೆರೆ ಅವರನ್ನು ಸೂಚಿಸಲಾಗಿದೆ
ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದು , ತೆಲಂಗಾಣ ರಾಜ್ಯದ ನೂತನ ಎಐಸಿಸಿ ಸ್ವತಂತ್ರ ಉಸ್ತುವಾರಿಯಾಗಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಕಳೆದ 26 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿದಿರುವ ಬಿ ಎಂ ಸಂದೀಪ್ ಚಿಕ್ಕಮಗಳೂರು ನಗರ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ 2009 ರಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ನಲ್ಲಿ ಜವಾಬ್ದಾರಿ ತೆಗೆದುಕೊಂಡು ತಮಿಳುನಾಡಿನಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸಿರುತ್ತಾರೆ, ತಮ್ಮ ಸಕ್ರಿಯ ರಾಜಕಾರಣದಿಂದ ಇಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯದರ್ಶಿಯಾಗಿ, ಚುನಾವಣಾ ಉಸ್ತುವಾರಿಯಾಗಿ ವಿವಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ, ಸುಮಾರು 20 ರಾಜ್ಯಗಳಲ್ಲಿ ಸೇವೆ ಸಲ್ಲಿಸಿರುವ ಬಿ ಎಂ ಸಂದೀಪ್ ಅವರ ಸೇವೆಯನ್ನು ಗುರುತಿಸಿರುವ ರಾಷ್ಟ್ರೀಯ ಕಾಂಗ್ರೇಸ್ ಹೈಕಮಾಂಡ್ ಮುಂದೆ ಸಂಘಟನೆಯನ್ನು ಬಲಪಡಿಸಲು ಮಣಿಪುರ ರಾಜ್ಯದ ಜವಾಬ್ದಾರಿಯನ್ನು ಬಿ ಎಂ ಸಂದೀಪ್ ಅವರ ಹೆಗಲಿಗೇರಿಸಿದೆ.
ಬಿ ಎಂ ಸಂದೀಪ್ ಅವರು ಮೂಲತಃ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದವರಾಗಿದ್ದು ಪ್ರಸ್ತುತ ಚಿಕ್ಕಮಗಳೂರಿನಲ್ಲಿ ನೆಲೆಸಿರುತ್ತಾರೆ. ಮುಂಬರುವ ಮಣಿಪುರ ರಾಜ್ಯದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಹಾಗೂ ತೆಲಂಗಾಣ ರಾಜ್ಯದ ನೂತನ ಎಐಸಿಸಿ ಉಸ್ತುವಾರಿ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಬಿ ಎಂ ಸಂದೀಪ್ ಅವರಿಗೆ ಬೆಟ್ಟಗೆರೆ ಗ್ರಾಮಸ್ಥರು, ಕುಟುಂಬಸ್ಥರು ಹಾಗೂ ಸಂಬಂಧಿಕರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
