ಸಕಲೇಶಪುರ: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಜೆಸಿಬಿ ಮೆಕ್ಯಾನಿಕ್ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬಾಳ್ಳುಪೇಟೆಯ ವೈಭವ್ ಲೇಔಟ್ ಸಮೀಪ ನಡೆದಿದೆ.
ಹಾಸನ ಮೂಲದ ವಿನಾಯಕ (30) ಮೃತ ದುರ್ದೈವಿ. ಸುನಿಲ್ (25) ಗಂಭೀರವಾಗಿ ಗಾಯಗೊಂಡವರು.
ಬಾಳ್ಳುಪೇಟೆಯಿಂದ ಸಕಲೇಶಪುರದತ್ತ ಬೈಕ್ನಲ್ಲಿ ವಿನಾಯಕ ಹಾಗೂ ಸುನಿಲ್ ತೆರಳುತ್ತಿದ್ದ ವೇಳೆ, ಸಕಲೇಶಪುರದಿಂದ ಹಾಸನದತ್ತ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ವಿನಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ವಿನಾಯಕ ಜೆಸಿಬಿ ಮೆಕ್ಯಾನಿಕ್ ಆಗಿದ್ದು, ಜೆಸಿಬಿ ದುರಸ್ತಿಗಾಗಿ ಸಕಲೇಶಪುರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೈಕ್ನಲ್ಲಿದ್ದ ಮತ್ತೊಬ್ಬ ಸವಾರ ಸುನಿಲ್ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೂಚನಾ ಫಲಕಗಳಿಲ್ಲದೆ ಅಪಘಾತಗಳ ಆತಂಕ!
ಇನ್ನು ವೈಭವ್ ಲೇಔಟ್ ವೃತ್ತದಲ್ಲಿ ಅಪಘಾತಗಳು ಪದೇಪದೇ ಸಂಭವಿಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸಕಲೇಶಪುರ ಹಾಗೂ ಹಾಸನ ಕಡೆಯಿಂದ ಬರುವ ವಾಹನಗಳು ಬಾಳ್ಳುಪೇಟೆ ಒಳಭಾಗಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಸಮರ್ಪಕ ಸೂಚನಾ ಫಲಕಗಳಿಲ್ಲದಿರುವುದೇ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಈ ವೃತ್ತದಲ್ಲಿ ವಾಹನಗಳ ಸಂಚಾರಕ್ಕೆ ಸೂಕ್ತ ಮಾರ್ಗಸೂಚಿ ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಿ, ಅಪಘಾತ ತಡೆಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
