Monday, October 12, 2026
Homeಜಿಲ್ಲಾಸುದ್ದಿಕೆಸವಳಲು ಗ್ರಾಮದಲ್ಲಿ ತಡೆಗೋಡೆ ಕಾಮಗಾರಿಗೆ ಕಂಟ್ರಾಕ್ಟರ್ʼಗಳ ಕಿತ್ತಾಟ: ಗ್ರಾಮಸ್ಥರ ಹಿತಾಸಕ್ತಿಗೆ ಆದ್ಯತೆ ನೀಡಲು ಒತ್ತಾಯ

ಕೆಸವಳಲು ಗ್ರಾಮದಲ್ಲಿ ತಡೆಗೋಡೆ ಕಾಮಗಾರಿಗೆ ಕಂಟ್ರಾಕ್ಟರ್ʼಗಳ ಕಿತ್ತಾಟ: ಗ್ರಾಮಸ್ಥರ ಹಿತಾಸಕ್ತಿಗೆ ಆದ್ಯತೆ ನೀಡಲು ಒತ್ತಾಯ

Telegram Group
Join Now

ಮೂಡಿಗೆರೆ: ತಾಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸವಳಲು ಗ್ರಾಮದ ಸಂಪರ್ಕ ರಸ್ತೆಯಲ್ಲಿ ದೇವಸ್ಥಾನದ ಬಳಿ ಸುಮಾರು ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿಗೆ ಇಬ್ಬರು ಗುತ್ತಿಗೆದಾರರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಈ ಬೆಳವಣಿಗೆ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದ ಬೆನ್ನಲ್ಲೇ, ಕಾಮಗಾರಿಯನ್ನು ತಾವೇ ನಿರ್ವಹಿಸಬೇಕೆಂದು ವಿನಯ್ ಮತ್ತು ರಂಜಿತ್ ಎಂಬ ಇಬ್ಬರು ಗುತ್ತಿಗೆದಾರರ ನಡುವೆ ಪೈಪೋಟಿ ಆರಂಭವಾಗಿದೆ. ಅನುದಾನ ತಂದು ಕಾಮಗಾರಿ ಮಾಡಿಸುವ ಹಕ್ಕು ತಮ್ಮದಾಗಿದೆ ಎಂದು ಓರ್ವ ಗುತ್ತಿಗೆದಾರ ವಾದಿಸಿದರೆ, ಶಾಸಕರು ತಮಗೆ ಕಾಮಗಾರಿ ವಹಿಸಿರುವುದರಿಂದ ತಾವೇ ನಿರ್ಮಾಣ ಕಾರ್ಯ ನಡೆಸುವುದಾಗಿ ಮತ್ತೊಬ್ಬ ಗುತ್ತಿಗೆದಾರ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇಬ್ಬರ ನಡುವಿನ ವಾಗ್ವಾದ ತೀವ್ರಗೊಂಡು, ಕಾಮಗಾರಿಯ ಬಿಲ್ ಪಡೆಯುವ ವಿಚಾರವಾಗಿಯೂ ಸವಾಲು-ಪ್ರತಿಸವಾಲುಗಳು ನಡೆದಿವೆ. ಇದನ್ನು ಗಮನಿಸಿದ ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ರಾಜಿ ಸಂಧಾನಕ್ಕೆ ಪ್ರಯತ್ನಿಸಿದರೂ, ಸಮಸ್ಯೆ ಬಗೆಹರಿಯಲಿಲ್ಲ. ಬಳಿಕ ಇಬ್ಬರೂ ಗುತ್ತಿಗೆದಾರರು ಶಾಸಕರು ಹಾಗೂ ಇಂಜಿನಿಯರ್‌ಗಳ ಗಮನಕ್ಕೆ ವಿಚಾರವನ್ನು ತಂದಿದ್ದು, ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಈ ಸಂಪರ್ಕ ರಸ್ತೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹಾಗೂ ಮೂಡಿಗೆರೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಹೀಗಾಗಿ ಇಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿ ಸಾರ್ವಜನಿಕರ ದೃಷ್ಟಿಯಿಂದ ಮಹತ್ವದ್ದಾಗಿದೆ. ಆದರೆ, ಜನರ ಅನುಕೂಲಕ್ಕಾಗಿ ನಡೆಯಬೇಕಾದ ಕಾಮಗಾರಿಯ ವಿಚಾರದಲ್ಲಿ ಗುತ್ತಿಗೆದಾರರ ನಡುವೆ ಪೈಪೋಟಿ ಉಂಟಾಗಿರುವುದು ಗ್ರಾಮಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಗುಣಮಟ್ಟದ ಕಾಮಗಾರಿಗೆ ಗ್ರಾಮಸ್ಥರ ಒತ್ತಾಯ

ಇಬ್ಬರು ಗುತ್ತಿಗೆದಾರರ ನಡುವಿನ ಪೈಪೋಟಿಯಿಂದ ಕಾಮಗಾರಿಯ ಗುಣಮಟ್ಟಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬುದು ಗ್ರಾಮಸ್ಥರ ಪ್ರಮುಖ ಆಶಯವಾಗಿದೆ. ಯಾರ ಪರ ನಿಲ್ಲಬೇಕು ಎಂಬ ಗೊಂದಲಕ್ಕಿಂತ, ಸಾರ್ವಜನಿಕರ ಹಣ ಸಮರ್ಪಕವಾಗಿ ಬಳಕೆಯಾಗಿ ತಡೆಗೋಡೆ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.

ಈ ಹಿನ್ನೆಲೆಯಲ್ಲಿ ಮೂಡಿಗೆರೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ (ಎಇಇ) ಗಣೇಶ್ ಹಾಗೂ ಇಂಜಿನಿಯರ್ ಶಿವಶರಣಪ್ಪ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗುತ್ತಿಗೆದಾರ ವಿನಯ್ ಅವರಿಗೆ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಡೆಸುವಂತೆ ಸೂಚನೆ ನೀಡಿದರು.

ಗುತ್ತಿಗೆದಾರರ ನಡುವಿನ ಪೈಪೋಟಿ ಏನೇ ಇರಲಿ, ಅಂತಿಮವಾಗಿ ಸಾರ್ವಜನಿಕರಿಗೆ ಗುಣಮಟ್ಟದ ಕಾಮಗಾರಿ ದೊರೆಯಬೇಕು. ಜನರ ತೆರಿಗೆ ಹಣದಲ್ಲಿ ನಡೆಯುವ ಕಾಮಗಾರಿಯಲ್ಲಿ ಪೈಪೋಟಿ ಪ್ರತಿಷ್ಠೆಯ ವಿಷಯವಾಗದೆ, ಉತ್ತಮ ಕೆಲಸಕ್ಕೆ ಪ್ರೇರಣೆಯಾಗಲಿ ಎಂಬುದು ಕೆಸವಳಲು ಗ್ರಾಮಸ್ಥರ ಆಶಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!