ಚಿಕ್ಕಮಗಳೂರು: ಹೊಲದಲ್ಲಿ ಬಾಳೆ ಗಿಡ ನೆಡುವ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನ ಮೇಲೆ ಏಕಾಏಕಿ ಜೇನು ನೋಣಗಳು ದಾಳಿ ನಡೆಸಿದ ಪರಿಣಾಮ 58 ವರ್ಷದ ವೃದ್ಧ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಕೋರಹನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಿವಪ್ಪ(58) ಎಂದು ಗುರುತಿಸಲಾಗಿದ್ದು ಹೊಲದಲ್ಲಿ ಬಾಳೆ ಗಿಡ ನೆಡುವ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ನೂರಾರು ಜೇನುನೊಣಗಳು ಕಾರ್ಮಿಕರ ಮೇಲೆ ದಾಳಿ ನಡೆಸಿವೆ. ಈ ವೇಳೆ ಇಬ್ಬರು ಕಾರ್ಮಿಕರು ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಆದರೆ ಶಿವಪ್ಪ ಜೇನುನೊಣಗಳ ದಾಳಿಗೆ ಸಿಲುಕಿದ್ದಾರೆ.
ಶಿವಪ್ಪನ ಮುಖ, ಕೈ, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಜೇನುನೊಣಗಳು ಕಚ್ಚಿವೆ ಕೂಡಲೇ ಅವರನ್ನು ಸರ್ಕಾರಿ ತರಿಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
