ಕೊಪ್ಪ: ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಮೀಸಲಾತಿಯಲ್ಲಿ ಹರಿಹರಪುರ ಹೋಬಳಿಯನ್ನು ನಿರ್ಲಕ್ಷಿಸಿದ್ದು ಪಕ್ಷದ ಮೇಲೂ, ಶಾಸಕರ ಮೇಲೂ, ಮುಖಂಡರ ಮೇಲೂ ಬೇಸರವಿದೆ ಎಂದು ನವೀನ್ ಕರುವಾನೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹರಿಹರಪುರ ಹೋಬಳಿಯಲ್ಲಿ ಸಾಮಾನ್ಯ ವರ್ಗದವರೇ ಹೆಚ್ಚಿದ್ದು, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಮೀಸಲಾತಿಯಲ್ಲಿ ಒಂದು ಸ್ಥಾನವನ್ನು ನೀಡದೆ ಇರುವುದು ನೋವಾಗಿದೆ. ನಾನು ಟಿಕೆಟ್ ಆಕಾಂಕ್ಷಿ ನಿಜ ಆದರೆ ಎರಡರಲ್ಲಿ ಒಂದು ಸಾಮಾನ್ಯ ವರ್ಗಕ್ಕೆ ಟಿಕೆಟ್ ನೀಡಿ ನನ್ನನ್ನು ಬಿಟ್ಟು ಯಾರನ್ನೇ ನಿಲ್ಲಿಸಿದ್ದರು ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮನ್ನು ಕೇಳದೆ ತೀರ್ಮಾನ ಮಾಡಿರುವುದು ನಮಗೆ ಆಶ್ಚರ್ಯ ತಂದಿದೆ.
ಸುಮಾರು 20 ವರ್ಷದಿಂದ ರೈತ ಹೋರಾಟ ಮಾಡಿದ್ದೇವೆ ಮಾಡುತ್ತ ಬರುತ್ತಿದ್ದೇವೆ. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋತಾಗ ಬಿಜೆಪಿ ವಿರುದ್ಧ ಹೋರಾಟ ಮಾಡಿ ಕೇಸ್ ಕೂಡ ಹಾಕಿಸಿಕೊಂಡವರಲ್ಲಿ ನಾನು ಕೂಡ ಒಬ್ಬ.
ರಾಜೇಗೌಡರು ಚುನಾವಣೆಗೆ ನಿಂತಾಗ ಚಾವಲ್ಮನೆ ಪಂಚಾಯತಿ ಉಸ್ತುವಾರಿ ವಹಿಸಿಕೊಂಡು ಕಣ್ಣೀರು ಹಾಕಿ ಮತ ಕೇಳಿ ಗೆಲ್ಲಿಸಿದ್ದೇವೆ. ಅಷ್ಟೇ ಅಲ್ಲದೆ ಸುಧೀರ್ ಕುಮಾರ್ ಜಿಲ್ಲಾ ಪಂಚಾಯತಿ ಚುನಾವಣೆಗೆ ನಿಂತಾಗ ಉತ್ತಮೇಶ್ವರ ಉಸ್ತುವಾರಿ ವಹಿಸಿ ಕಾರ್ಯ ನಿರ್ವಹಿಸಿದ್ದೇನೆ. ಬಿಜೆಪಿಯೇ ಪ್ರಬಲವಾಗಿರುವ ಶಾನುವಳ್ಳಿ ಪಂಚಾಯತಿಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವ ಪ್ರಯತ್ನವನ್ನು ಮಾಡಿದ್ದೇನೆ.
ನಮ್ಮದೇ ಹಣ ಖರ್ಚು ಮಾಡಿ ಪಕ್ಷಕ್ಕಾಗಿ ದುಡಿದ ನಮ್ಮಂತವರನ್ನು ಪಕ್ಷ ಏನು ಕೇಳದೆ ಈ ರೀತಿ ನಡೆಸಿಕೊಂಡಿರುವುದು ಬಹಳಷ್ಟು ಕುಗ್ಗುವಂತೆ ಮಾಡಿದೆ ಎಂದಿದ್ದಾರೆ.
ಪಕ್ಷದ ಬಲವಾಗಿದ್ದ ನವೀನ್ ಕರುವಾನೆ.
ನವೀನ್ ಕರುವಾನೆ ಶೃಂಗೇರಿ ಕ್ಷೇತ್ರದಲ್ಲಿ ಒಂದು ಕಿಡಿಯಾಗಿ ಬೆಳೆದವರು ಅದೆಂತ ಹೋರಾಟವೇ ಇರಲಿ, ಅದೆಂತ ಪ್ರತಿಭಟನೆಯೇ ಇರಲಿ. ತನ್ನೆಲ್ಲ ಕೆಲಸಗಳನ್ನು ಬಿಟ್ಟು ಪಕ್ಷಕ್ಕಾಗಿ ಸಮಯ ಕೊಟ್ಟು ಪ್ರತಿಭಟನೆ ಹೋರಾಟ ಮಾಡುತ್ತ ಬಂದ ವ್ಯಕ್ತಿ. ಯಾವುದೇ ಭೇದ ಭಾವ ಮಾಡದೆ ನೊಂದವರ ಧ್ವನಿಯಾಗಿ ಮಾತನಾಡುವ ವ್ಯಕ್ತಿ ಆದರೆ ಇಂದು ಅವರ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಸಣ್ಣ ಗೊಂದಲ ಉಂಟು ಮಾಡಿರುವುದಂತೂ ಸತ್ಯ.
ನವೀನ್ ಕರುವಾನೆ ಆಕಾಂಕ್ಷಿ ಅಂತ ಗೊತ್ತಿದ್ದೆ ಮೀಸಲಾತಿ ತಪ್ಪಿಸಲಾಯ್ತಾ?
ಈ ಭಾರೀ ಚುನಾವಣೆಯಲ್ಲಿ ನವೀನ್ ಕರುವಾನೆ ಆಕಾಂಕ್ಷಿ ಎಂಬುದು ಪಕ್ಷದೊಳಗೆ ಗೊತ್ತಿದ್ದ ವಿಷಯವೇ. ಆದರೆ ಹಿರಿಯ ನಾಯಕರಾದ ನವೀನ್ ಕರುವಾನೆಯ ಅಭಿಪ್ರಾಯ ಕೇಳದೆ ಪಕ್ಷ ಮೀಸಲಾತಿ ತರದೆ ಇರುವುದು ಕಾಣದ ಕೈಗಳು ಕೆಲಸ ಮಾಡಿದ್ದಾವೆಯೇ ಎಂಬುದು ನವೀನ್ ಕರುವಾನೆ ಅವರಿಗೂ ಅನುಮಾನ ಮೂಡಲು ಕಾರಣವಾಗಿದೆ.
*ನವೀನ್ ಕರುವಾನೆ ಅವರ ಪ್ರತಿಭಟನೆ ಅವರಿಗೆ ಮುಳುವಾಯ್ತಾ?*ನವೀನ್ ಕರುವಾನೆ ಹೇಳಿ ಕೇಳಿ ನೇರ ನಿಷ್ಠುರವಾದಿ, ಸರ್ಕಾರದ ವಿರುದ್ಧ ಹೋರಾಟ ಮಾಡುವಾಗಲೂ ಒಬ್ಬ ರೈತನಾಗಿ ಶಾಸಕರನ್ನು
ಮುಲಾಜಿಲ್ಲದೇ ಪ್ರಶ್ನೆ ಮಾಡುವ ಗುಣ ಅವರದ್ದು. ಸದಾ ತಾಲೂಕಿನ ಜನರ ಒಳಿತಿಗಾಗಿ ತಾಲೂಕು ಕಛೇರಿ ಮುಂದೆ ಏಕಾಂಗಿಯಾಗಿ ಹೋರಾಟ ಮಾಡಿದ್ದು ಇದೇ. ತಾಲೂಕು ಕಛೇರಿಯಲ್ಲಿ ಕೆಲ ಆಫೀಸ್ ಗಳು ನೆಲ ಮಹಡಿಗೆ ಬರಬೇಕೆಂದು ಪಟ್ಟು ಹಿಡಿದು ಹೋರಾಟ ಕೂಡ ಮಾಡಿದವರು. ಇವೆಲ್ಲ ತನ್ನ ಪಕ್ಷದವರಾಗಿ ಶಾಸಕರಿಗೂ ಬೇಸರಕ್ಕೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ.
ಹಿರಿಯ ನಾಯಕನಾಗಿ ಪಕ್ಷಕ್ಕಾಗಿ ಹಗಲಿರುಳು ದುಡಿದ ನನಗೆ ಈ ರೀತಿಯಾಗಿದ್ದು ಪಕ್ಷ ನನಗೆ ಉತ್ತರಿಸಬೇಕು ಮೀಸಲಾತಿಗೆ ನಮ್ಮ ಅಭಿಪ್ರಾಯ ಕೇಳದೆ ಯಾರಿಂದ ತೀರ್ಮಾನ ಆಗಿದೆ ಎಂದು ತಿಳಿಯಬೇಕು ಇಲ್ಲದಿದ್ದರೆ ನನ್ನ ತೀರ್ಮಾನವನ್ನು ನಾನು ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ನವೀನ್ ಕರುವಾನೆ ಚಾಟಿ ಬೀಸಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
