ಮೂಡಿಗೆರೆ : ಉರ್ದು ಭಾಷೆ ಮೀಸಲಾತಿ ಮೂಲಕ ಕರ್ನಾಟಕದಲ್ಲಿ ಕನ್ನಡದ ಮೇಲೆ ಪ್ರಹಾರ ನಡೆಸುತ್ತಿರುವ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಿ, ಸರ್ಕಾರ ಈಗಿರುವ ತನ್ನ ಆದೇಶವನ್ನು ಹಿಂಪಡೆಯಬೇಕು ಮತ್ತು ಎಲ್ಲಾ ಭಾಷಿಕರು ಅರ್ಜಿ ಸಲ್ಲಿಸಲು ಅನುವು ಮಾಡಿ ಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಆಗ್ರಹಿಸಿದ್ದಾರೆ.
ನಗರದ ಐದನೇ ವಾರ್ಡ್ ಮಾರ್ಕೆಟ್ ರಸ್ತೆಯ ಸರ್ಕಾರಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಭಾಷೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ವಿವಿಧ ಇಲಾಖೆಗೆ ಮನವಿ ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದರು. ಕನ್ನಡ ಮಾತನಾಡುವ ಮಲೆನಾಡಿನ ಮೂಡಿಗೆರೆಯಲ್ಲಿ ಎಳೆ ವಯಸ್ಸಿನ ಮಕ್ಕಳ ಮನಸ್ಸಲ್ಲಿ ಸರ್ಕಾರದಿಂದಲೇ ಕನ್ನಡ ಕೊಲ್ಲಲು ಹೊರಟಿರುವುದು ನಿಜಕ್ಕೂ ಆಘಾತವಾಗಿದೆ. ಈ ಅಂಗನವಾಡಿಗೆ ಎಲ್ಲಾ ಧರ್ಮದ ಎಳೆವಯಸಿನ ಮಕ್ಕಳು ಹೋಗುತ್ತಿದ್ದರು, ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿರುವುದು ಕನ್ನಡಕ್ಕೆ ಬಗೆದಿರುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೋಷಿತರು, ಹಿಂದುಳಿದ ಹಾಗೂ ಇತರೆ ಜನಾಂಗದವರು ಈ ಹುದ್ದೆಗೆ ಅರ್ಜಿ ಸಲ್ಲಿಸದಂತೆ ತಡೆ ಹಿಡಿಯುವ ಹುನ್ನಾರವಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಅಂಗನವಾಡಿ ಕನ್ನಡಿಗರ ತೆರಿಗೆಯಿಂದ ನಡೆಯುತ್ತಿದೆ. ಅಧಿಕಾರಿಗಳನ್ನು ಅಮಾನತು ಮಾಡಬೇಕು ಇಲ್ಲದಿದ್ದಲ್ಲಿ ಒಂದೆರಡು ದಿನದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಸಭೆ ಕರೆದು ನಿರ್ಣಯಿಸಿ ಬೃಹತ್ ಹೋರಾಟಕ್ಕೆ ಕರೆ ನೀಡುವುದಾಗಿ ಎಚ್ಚರಿಸಿದರು.
ಕನ್ನಡ ಸೇನೆ ತಾಲೂಕು ಅಧ್ಯಕ್ಷ ರಘು ಹೊರಟ್ಟಿ, ಕರವೇ ತಾಲೂಕು ಅಧ್ಯಕ್ಷ ವಿನೋದ್. ಶ್ರೇಷ್ಟಿ ಎಂ.ವಿ., ವಿಶ್ವ ಹಾರ್ಲಗದ್ದೆ, ಗೀತಾ ಚತ್ರ ಮೈದಾನ ಮತ್ತಿತರರಿದ್ದರು.




