ಹಾಸನ : ಟೆಂಡರ್ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರಸಭೆ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಬೆಳವಣಿಗೆ ಹಾಸನದಲ್ಲಿ ನಡೆದಿದೆ.
ನಗರಸಭೆ ಕಮಿಷನರ್ ನರಸಿಂಹಮೂರ್ತಿ, ಎಇಇ ಕೆ.ಆರ್. ವೆಂಕಟೇಶ್ ಲೋಕಾ ದಾಳಿಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳು. ಹಾಸನಾಂಬ ದೇವಾಯಲ ಆವರಣದ ಸ್ವಚ್ಛತೆ ಸಂಬಂಧ ಆಡುವಳ್ಳಿ ಸುನೀಲ್ ಎಂಬವರು ಟೆಂಡರ್ ಪಡೆದಿದ್ದರು. ಟೆಂಡರ್ ಬಿಲ್ ಕ್ಲಿಯರ್ ಮಾಡಬೇಕೆಂದರೆ ೩ ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಮುಂಗಡವಾಗಿ ಒಂದೂವರೆ ಲಕ್ಷ ರೂ. ಪಡೆಯುತ್ತಿದ್ದ ಸಂದರ್ಭ ಲೋಕಾ ಇನ್ಸ್‌ಪೆಕ್ಟರ್ ಬಾಲು ಹಾಗೂ ಶಿಲ್ಪಾ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾ ದಾಳಿ ಸಂದರ್ಭ ಅಧಿಕಾರಿಗಳ ಪರ ವಕಾಲತ್ತು ವಹಿಸಿಕೊಂಡು ಕೆಲವು ನಗರಸಭೆ ಸದಸ್ಯರು ಬಂದಿದ್ದಾರೆ. ಈ ವೇಳೆ ಲೋಕಾ ಅಧಿಕಾರಿಗಳು ನಗರಸಭೆ ಸದಸ್ಯರ ಚಳಿಬಿಡಿಸಿದ್ದಾರೆ. ನಾವು ಅಮಾಯಕರ ಮೇಲೆ ದಾಳಿ ಮಾಡಿಲ್ಲ, ನೀವು ಇಲ್ಲಿಂದ ಹೊರಡಿ ಅಂತ ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ.
ಎರಡನೇ ದಾಳಿ : ಹಾಸನ ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಆಗಿರುವ ಎರಡನೇ ಲೋಕಾಯುಕ್ತ ದಾಳಿ ಇದು. ಕೆಲ ದಿನದ ಹಿಂದೆ ಡಿಡಿಪಿಐ ಪಾಂಡು ಹಾಗೂ ಕಚೇರಿ ಅಧೀಕ್ಷಕ ಲೋಕಾ ಬಲೆಗೆ ಬಿದ್ದಿದ್ದರು. ಇದೀಗ ಮತ್ತೊಂದು ದಾಳಿಯಲ್ಲಿ ನಗರಸಭೆಯ ಅಧಿಕಾರಿಗಳು ಖೆಡ್ಡಾಗೆ ಬಿದ್ದಿದ್ದಾರೆ. ಹಾಸನದಲ್ಲಿ ಭ್ರಷ್ಟಾಚಾರ ಯಾವ ರೀತಿ ಅನ್ನೋದಕ್ಕೆ ಈ ಬೆಳವಣಿಗೆಗಳೇ ಸಾಕ್ಷಿಯಾಗಿದೆ.
