Wednesday, July 1, 2026
Homeಉದ್ಯೋಗInfosys Narayana Murthy ಸಾಧಿಸಿದ ಯಶಸ್ಸಿನ ಹಿಂದೆ ಅಂದು ಎಷ್ಟು ಸಂಕಷ್ಟಗಳಿದ್ದವು ಗೊತ್ತೇ!?

Infosys Narayana Murthy ಸಾಧಿಸಿದ ಯಶಸ್ಸಿನ ಹಿಂದೆ ಅಂದು ಎಷ್ಟು ಸಂಕಷ್ಟಗಳಿದ್ದವು ಗೊತ್ತೇ!?

ಪರಿಸ್ಥಿತಿಗಳು ಯಶಸ್ಸನ್ನು ನಿರ್ಧರಿಸುವುದಿಲ್ಲ. ಸಂಕಷ್ಟಗಳ ನಡುವೆಯೂ ಕನಸನ್ನು ಕೈಬಿಡದ ಮನೋಬಲವೇ ಇತಿಹಾಸ ನಿರ್ಮಿಸುತ್ತದೆ.
1981ರಲ್ಲಿ ಎನ್. ಆರ್. ನಾರಾಯಣ ಮೂರ್ತಿ ಅವರು Infosys ಸಂಸ್ಥೆಯನ್ನು ಆರಂಭಿಸಿದಾಗ, ಅವರ ಮುಂದೆ ಇದ್ದದ್ದು ಕನಸಿಗಿಂತ ದೊಡ್ಡ ಸವಾಲುಗಳೇ. ಇಂದು ವಿಶ್ವದ ಐಟಿ ದಿಗ್ಗಜ ಸಂಸ್ಥೆಯಾಗಿ ಬೆಳೆದಿರುವ Infosys‌ನ ಅಡಿಪಾಯ, ನೂರಾರು ಸಂಕಷ್ಟಗಳು, ಅಡ್ಡಿಗಳು ಮತ್ತು ಅನಿಶ್ಚಿತತೆಗಳ ನಡುವೆ ನಿರ್ಮಾಣವಾಗಿತ್ತು.
ಸಂಸ್ಥೆ ಆರಂಭವಾದ ಮೊದಲ ಕೆಲವು ವರ್ಷಗಳಲ್ಲಿ ಅವರ ಸಹೋದ್ಯೋಗಿಗಳೆಲ್ಲರೂ ಅಮೆರಿಕದಲ್ಲಿದ್ದರು. ಭಾರತದಲ್ಲಿ ಉಳಿದುಕೊಂಡಿದ್ದವರು ನಾರಾಯಣಮೂರ್ತಿಯವರೊಬ್ಬರೇ. ಹೀಗಾಗಿ ಪ್ರತಿಯೊಂದು ಆತಂಕದ ಕ್ಷಣ, ಪ್ರತಿಯೊಂದು ಆಡಳಿತಾತ್ಮಕ ಅಡೆತಡೆ ಮತ್ತು ಪ್ರತಿಯೊಂದು ನಿರ್ಧಾರದ ಹೊರೆ ಅವರೊಬ್ಬರ ಹೆಗಲ ಮೇಲೆಯೇ ಇತ್ತು.
ಆ ಕಾಲದಲ್ಲಿ ಒಂದು ದೂರವಾಣಿ ಸಂಪರ್ಕ ಪಡೆಯಲು ಏಳು ವರ್ಷಗಳವರೆಗೆ ಕಾಯಬೇಕಾಗುತ್ತಿತ್ತು. ಸುಮಾರು ಮೂರು ಲಕ್ಷ ಡಾಲರ್ ಮೌಲ್ಯದ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳಲು ಅಗತ್ಯವಾದ ಲೈಸೆನ್ಸ್ ಪಡೆಯಲು ಅವರು ಸುಮಾರು ಮೂವತ್ತು ಬಾರಿ ದೆಹಲಿಗೆ ತೆರಳಬೇಕಾಯಿತು. ಆ ಪ್ರಕ್ರಿಯೆಯೇ ಎರಡು ವರ್ಷಗಳ ಕಾಲ ಮುಂದುವರಿಯಿತು. ಲೈಸೆನ್ಸ್‌ನಲ್ಲಿ ಸಣ್ಣ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೂ ಮತ್ತೆ ಹತ್ತು ಬಾರಿ ದೆಹಲಿಗೆ ಹೋಗಬೇಕಾಯಿತು.
ಅಂದಿನ ದಿನಗಳಲ್ಲಿ ದೆಹಲಿಗೆ ಪ್ರಯಾಣಿಸುವುದೂ ಸುಲಭದ ಮಾತಾಗಿರಲಿಲ್ಲ. ರೈಲಿನಲ್ಲಿ ಎರಡು ದಿನಗಳ ಪ್ರಯಾಣ. ಬೆಂಗಳೂರಿನಿಂದ ದೆಹಲಿಗೆ ದಿನಕ್ಕೆ ಒಂದೇ ವಿಮಾನ. ಲೈಸೆನ್ಸ್ ದೊರೆಯಲು ಒಂಬತ್ತು ತಿಂಗಳು ಬೇಕಾಗುತ್ತಿತ್ತು. ಒಂದು ದಿನದ ವಿದೇಶಿ ವ್ಯವಹಾರ ಸಭೆಗೆ ಹೋಗಿಬರಲು ಅಗತ್ಯವಾದ ವಿದೇಶಿ ವಿನಿಮಯ ಪಡೆಯುವುದಕ್ಕೂ ಎರಡು ವಾರಗಳ ಕಾಲ ಸರ್ಕಾರಿ ಕಚೇರಿಗಳ ಸುತ್ತಾಟ ಅನಿವಾರ್ಯವಾಗಿತ್ತು.
ಇನ್ನೊಂದು ದೊಡ್ಡ ಸವಾಲು ಎಂದರೆ, ಬ್ಯಾಂಕುಗಳಿಗೆ “ಸಾಫ್ಟ್‌ವೇರ್” ಎಂಬ ಉದ್ಯಮವೇ ಹೊಸದು. ಅದರ ವ್ಯವಹಾರ ಮಾದರಿ, ಮೌಲ್ಯ ಅಥವಾ ಭವಿಷ್ಯದ ಬಗ್ಗೆ ಅವರಿಗೆ ಸ್ಪಷ್ಟ ಅರಿವಿರಲಿಲ್ಲ. ಎಷ್ಟೇ ವಿವರಿಸಿದರೂ ಸುಲಭವಾಗಿ ಅರ್ಥವಾಗುತ್ತಿರಲಿಲ್ಲ.
ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೇ ನಾರಾಯಣಮೂರ್ತಿಯವರು Infosys ಸಂಸ್ಥೆಗೆ ಅಡಿಪಾಯ ಹಾಕಿದರು. ಇಂದು ಆ ಸಂಸ್ಥೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜಾಗತಿಕ ಸಂಸ್ಥೆಯಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments