ಹಾಸನ: ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ದಸರಾ ಮಹೋತ್ಸವ ಉದ್ಘಾಟನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಸ್ವಾಗತಾರ್ಹ ಎಂದು ಶಾಸಕ ಎಚ್. ಡಿ. ರೇವಣ್ಣ ಹೇಳಿದರು
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು ಹಿರಿಯ ಸಾಹಿತಿ ಬಾನು ಮುಷ್ತಾಕ್ ರವರು ಹೋರಾಟಗಾರ್ತಿ ಇವರು ನಾಡ ಹಬ್ಬ ದಸರಾ ಉದ್ಘಾಟನೆ ಮಾಡುತ್ತಿರುವುದು ಒಳ್ಳೆಯ ವಿಚಾರ. ಇದರಲ್ಲಿ ರಾಜಕಾರಣ ಅಥವಾ ಧರ್ಮ ಬೆರಸುವುದು ಸರಿಯಲ್ಲ.
ನಮ್ಮದು ಜಾತ್ಯತೀತ ರಾಷ್ಟ್ರ ಎಲ್ಲರಿಗೂ ಅವಕಾಶವಿದೆ .ಹಾಸನ ಜಿಲ್ಲೆಯ ಮಹಿಳೆಗೆ ಅವಕಾಶ ಸಿಕ್ಕಿದೆ ಇದನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಹಾಸನ ಜಿಲ್ಲೆಯ ಮಹಿಳೆಗೆ ಒಂದು ಅವಕಾಶ ಕೊಟ್ಟಿದ್ದಾರೆ, ಅವರೂ ಹೋರಾಟ ಮಾಡಿಕೊಂಡು ಬಂದಿರುವವರು, ಬಾನು ಮುಷ್ತಾಕ್ ಅವರು ದೇವೇಗೌಡರ ಕಾಲದವರು. ಇದರಲ್ಲಿ ರಾಜಕೀಯ ಎಲ್ಲಾ ಬಿಟ್ಟಾಕಿ, ಇದಕ್ಕೆಲ್ಲಾ ವಿರೋಧ ಮಾಡಬಾರದು. ಅಬ್ದುಲ್‍ಕಲಾಂ ರಾಷ್ಟ್ರಪತಿ ಆಗಿರಲಿಲ್ಲವೇ, ದೇವೇಗೌಡರು ಅವರನ್ನು ಹೇಗೆ ನಡೆಸಿಕೊಂಡರು ಎಂದು ಪ್ರಶ್ನಿಸಿದ್ದಾರೆ.
ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸುತ್ತಿರುವ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆ ಬಾನು ಮುಸ್ತಾಕ್ ಅವರಿಗೆ ಕಲಾವಿದೆ ಶಶಿಕಲಾ ಅವರು ಹಿಂದು ಪರಂಪರೆ ಅನ್ವಯ ಬಾಗಿನ ನೀಡಿ ಶುಭಹಾರೈಸಿದ ಘಟನೆ ವಿಶೇಷ ಗಮನ ಸೆಳೆಯಿತು.
” ಶಶಿಕಲಾ ನಡೆಸುತ್ತಿರುವ ‘ಅಮ್ಮನ ಮಡಿಲು ಟ್ರಸ್ಟ್’ ಮೂಲಕ ಅನಾಥ ಮಕ್ಕಳಿಗೆ, ವೃದ್ಧರಿಗೆ, ಆಶ್ರಯ, ಆಹಾರ, ಶಿಕ್ಷಣ ಮತ್ತು ಆರೈಕೆ ನೀಡಲಾಗುತ್ತಿದೆ. ಈ ಆಶ್ರಮವು ಬೆಂಗಳೂರು 8ನೇ ಮೈಲಿ, ಗಂಗೂಡ್ನಲ್ಲಿ ನೆಲಗದರ ರಸ್ತೆಯಲ್ಲಿ ನೆಲೆಗೊಂಡಿದ್ದು, ಅನೇಕರ ಜೀವನಕ್ಕೆ ಬೆಳಕು ತಂದಿದೆ “
ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಮಾಡುವ ಗೌರವ ಬಾನು ಮುಷ್ಕಾಕ್ ರವರಿಗೆ ಸಂದಿರುವುದು ತಿಳಿದ ಕಲಾವಿದೆ ಶಶಿಕಲಾ, ವಿಶೇಷವಾಗಿ ಬಾಗಿನ ಸಿದ್ಧಪಡಿಸಿ ಅವರ ನಿವಾಸಕ್ಕೆ ತೆರಳಿ ಅರ್ಪಿಸಿದರು.
ಬಾಗಿನದಲ್ಲಿ ಹಸಿ ಅಕ್ಕಿ, ಅರಿಶಿನ-ಕುಂಕುಮ, ಸಕ್ಕರೆ, ತೆಂಗಿನ ಕಾಯಿ, ಹಣ್ಣು-ಹೂವು, ಬಳೆ, ಎಲೆ ಅಡಿಕೆ ಇತರೆ ವಸ್ತುಗಳಿ ಇಡಲಾದ ಬಾಗಿನವನ್ನು ಬಾನು ಮುಷ್ಕಾಕ್ ಅವರಿಗೆ ಅರ್ಪಿಸುವ ಮೂಲಕ ಶಶಿಕಲಾ ತಮ್ಮ ಗೌರವ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಬಾಗಿನದಲ್ಲಿ ನಾನು ಹೃದಯದ ಪ್ರೀತಿ, ಕನ್ನಡದ ಕೃತಜ್ಞತೆ ಮತ್ತು ಬಾನು ತಾಯಿಯ ಸಾಧನೆಗೆ ನನ್ನ ಸಣ್ಣ ಹಾರೈಕೆಗಳಿವೆ” ಎಂದು ಭಾವುಕರಾಗಿ ಹೇಳಿದರು.
ಚಾಮುಂಡೇಶ್ವರಿ ದೇವಿ ಬಾನು ಅವರನ್ನು ದಸರಾ ಉತ್ಸವಕ್ಕೆ ಕರೆಸಿಕೊಳ್ಳುತ್ತಿದ್ದಾಳೆ. ಇದು ಕನ್ನಡಕ್ಕೆ ಸಂದ ಗೌರವ. ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಗೆ ಸಿಕ್ಕ ಗೌರವ ಮಾತ್ರವಲ್ಲ ನಾಡಿನ ಮಹಿಳೆಯರಿಗೆ ಸಲ್ಲಿಕೆಯಾಗುತ್ತಿರುವ ಗೌರವ ಎಂದು ಹೇಳಿದರು.,
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದ ಬಾನು ಮುಸ್ತಾಕ್, ಕನ್ನಡ ಸಾಹಿತ್ಯಕ್ಕೆ ನೂತನ ಶಕ್ತಿ ತುಂಬಿದವರು. ಗ್ರಾಮೀಣ ಮಹಿಳೆಯ ಹೃದಯದ ದೀಪವನ್ನು ಆಳವಾಗಿ ಬೆಳಗಿಸಿದ ಅವರ ಕೃತಿಗಳು, ಕನ್ನಡದ ಅಂಚುಗಳಿಂದ ಜಾಗತಿಕ ವೇದಿಕೆಗೆ ಬೆಳಕು ಹರಿಸಿವೆ. ಅವರ ಕೈಯಿಂದ ನಾಡಹಬ್ಬ ದಸರಾ ಉದ್ಘಾಟನೆಯಾಗುತ್ತಿರುವುದು ಕೇವಲ ಸಾಹಿತ್ಯ ಲೋಕಕ್ಕೇ ಅಲ್ಲ, ಸಂಪೂರ್ಣ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ನಮ್ಮ ಬಾನು ತಾಯಿ ಸಾಹಿತ್ಯದ ಮೂಲಕ ಬಡವರ, ಹಿಂದುಳಿದವರ, ಹೋರಾಟಗಾರರ ಧ್ವನಿಯನ್ನು ವಿಶ್ವಕ್ಕೆ ಕೇಳಿಸಿದ್ದಾರೆ. ಅವರು ದಸರಾ ಉದ್ಘಾಟನೆ ಮಾಡುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ. ನಾನು ಕಲಾವಿದೆಯಾದರೂ, ನನ್ನ ಬಾಗಿನ ಮೂಲಕ ಅವರಿಗೆ ಅರ್ಪಿಸಿದ ಗೌರವ ನನ್ನ ಜೀವಮಾನದಲ್ಲೇ ದೊಡ್ಡ ನೆನಪು” ಎಂದು ಶಶಿಕಲಾ ಅಭಿಮಾನಪೂರ್ವಕವಾಗಿ ಹೇಳಿದರು.
ಅಭಿನಯ ಲೋಕದಲ್ಲಿ ಶಶಿಕಲಾ ಅವರ ಪಯಣ ವಿಸ್ತಾರವಾಗಿದೆ. ಇದುವರೆಗೆ 600ಕ್ಕೂ ಹೆಚ್ಚು ಚಿತ್ರಗಳು, 50 ಸೀರಿಯಲ್‌ಗಳು, ಹಾಗೂ 50ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ. ನೂರಾರು ಪಾತ್ರಗಳಲ್ಲಿ ನಟಿಸಿದರೂ, ಮನುಷ್ಯತ್ವವನ್ನು ಆಳವಾಗಿ ಅರ್ಥೈಸಿ ಬದುಕುತ್ತಿರುವ ಶಶಿಕಲಾ ಅವರು ಕೇವಲ ಕಲಾವಿದೆಯಲ್ಲ, ಸಮಾಜ ಸೇವಕಿಯಾಗಿಯೂ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
