ಸಂಘಟಿತ ಗ್ಯಾಂಗ್ವೊಂದು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯದ (ED) ಪಾಟ್ನಾ ವಲಯ ಕಚೇರಿಯು ದೇಶಾದ್ಯಂತ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದೆ.
ಈ ವಂಚನೆ ಜಾಲವು ಆರಂಭದಲ್ಲಿ ಕೇವಲ ಭಾರತೀಯ ರೈಲ್ವೇಗೆ ಸೀಮಿತವಾಗಿದೆ ಎಂದು ಭಾವಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಅರಣ್ಯ ಇಲಾಖೆ, ಆದಾಯ ತೆರಿಗೆ ಇಲಾಖೆ, ಭಾರತೀಯ ಅಂಚೆ, ಹೈಕೋರ್ಟ್, ಪಿಡಬ್ಲ್ಯೂಡಿ (PWD), ಬಿಹಾರ ಸರ್ಕಾರ, ಡಿಡಿಎ (DDA) ಮತ್ತು ರಾಜಸ್ಥಾನ ಸಚಿವಾಲಯ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಈ ಗ್ಯಾಂಗ್ ತನ್ನ ಕಬಂಧ ಬಾಹುಗಳನ್ನು ಚಾಚಿರುವುದು ಪತ್ತೆಯಾಗಿದೆ.
ಈ ವಂಚಕರು ಅತ್ಯಂತ ಚಾಣಾಕ್ಷತನದಿಂದ ಕೆಲಸ ಮಾಡುತ್ತಿದ್ದು, ಅಧಿಕೃತ ಸರ್ಕಾರಿ ಡೊಮೇನ್ಗಳನ್ನು ಹೋಲುವ ನಕಲಿ ಇ-ಮೇಲ್ ಖಾತೆಗಳನ್ನು ಸೃಷ್ಟಿಸಿ ಅಭ್ಯರ್ಥಿಗಳಿಗೆ ನಕಲಿ ನೇಮಕಾತಿ ಪತ್ರಗಳನ್ನು ಕಳುಹಿಸುತ್ತಿದ್ದರು. ಸಂತ್ರಸ್ತರ ನಂಬಿಕೆ ಗಳಿಸಲು ಈ ಗ್ಯಾಂಗ್ ಎರಡು-ಮೂರು ತಿಂಗಳ ಕಾಲ ಸಂಬಳವನ್ನೂ ನೀಡುತ್ತಿತ್ತು. ರೈಲ್ವೇ ಸಂರಕ್ಷಣಾ ಪಡೆ (RPF), ಟಿಟಿಇ (TTE) ಮತ್ತು ತಂತ್ರಜ್ಞರಂತಹ ಹುದ್ದೆಗಳಿಗೆ ತಾವು ನೇಮಕಗೊಂಡಿದ್ದೇವೆ ಎಂದು ನಿರುದ್ಯೋಗಿಗಳು ನಂಬುವಂತೆ ಇವರು ವ್ಯವಸ್ಥೆ ಮಾಡಿದ್ದರು.
ಸದ್ಯ ಇಡಿ ಅಧಿಕಾರಿಗಳು ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಒಟ್ಟು 15 ಆಯಕಟ್ಟಿನ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
