ಮೂಡಿಗೆರೆ: ಮೂಡಿಗೆರೆ ಮತ್ತು ಕಳಸ ತಾಲ್ಲೂಕುಗಳಲ್ಲಿ ಗ್ರೇಡ್-1 ಹಾಗೂ ಗ್ರೇಡ್-2 ಪಂಚಾಯಿತಿ ಕಾರ್ಯದರ್ಶಿಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಜವಾಬ್ದಾರಿಯನ್ನು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಲಾಗುತ್ತಿದೆ. ಈ ಹುದ್ದೆಗಳ ಹಂಚಿಕೆಯಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ವ್ಯವಹಾರ ನಡೆದಿರುವ ಶಂಕೆಯಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಂ.ಎ. ಸಲಾವುದ್ದೀನ್ ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರದ ನಿಯಮಗಳ ಪ್ರಕಾರ ಗ್ರೇಡ್-2 ಕಾರ್ಯದರ್ಶಿಗಳಿಗೆ ಯಾವುದೇ ಸಂದರ್ಭದಲ್ಲಿಯೂ ಪಿಡಿಒ ಜವಾಬ್ದಾರಿ ವಹಿಸುವಂತಿಲ್ಲ. ಆದರೆ ಕಳಸ ತಾಲ್ಲೂಕಿನ ಸಂಸೆ ಮತ್ತು ಮರಸಣಿಗೆ ಹಾಗೂ ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರೇಡ್-2 ಕಾರ್ಯದರ್ಶಿಗಳಿಗೆ ಈ ಜವಾಬ್ದಾರಿ ನೀಡಿರುವುದು ನಿಯಮ ಉಲ್ಲಂಘನೆಯಾಗಿದೆ. ಇದರಿಂದ ಜಿಲ್ಲಾಡಳಿತದ ಆಡಳಿತಾತ್ಮಕ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಅವರು ದೂರಿದ್ದಾರೆ.
ಇನ್ನು ಸುಂಕಸಾಲೆ ಗ್ರಾಮ ಪಂಚಾಯಿತಿಗೆ ಸುಮಾರು 50 ಕಿ.ಮೀ. ದೂರದ ಹೆಸ್ಗಲ್ನ ಗ್ರೇಡ್-1 ಕಾರ್ಯದರ್ಶಿಯನ್ನು ನೇಮಿಸಿರುವುದು ಕರ್ತವ್ಯ ನಿರ್ವಹಣೆಗೆ ತೊಂದರೆಯಾಗುವಂತೆ ಮಾಡಿದೆ. ಮಾಕೋನಹಳ್ಳಿ ಗ್ರಾಮ ಪಂಚಾಯಿತಿಯ ಹಾಲಿ ಪಿಡಿಒ ಅವರನ್ನು ಕಳೆದ ಮೂರು ವರ್ಷಗಳಿಂದ ಲೆಕ್ಕಾಧಿಕಾರಿಯಾಗಿ (ಅಕೌಂಟ್ಸ್ ಆಫೀಸರ್) ನಿಯೋಜಿಸಿರುವುದು ಕಾನೂನುಬಾಹಿರವಾಗಿದೆ. ಮೂಡಿಗೆರೆ ತಾಲ್ಲೂಕು ಪಂಚಾಯಿತಿಯಲ್ಲಿ ವ್ಯವಸ್ಥಾಪಕರ ಹುದ್ದೆಗೆ ಪಿಡಿಒಗಳನ್ನು ಪ್ರಭಾರವಾಗಿ ನೇಮಿಸಲು ಅವಕಾಶವಿದ್ದರೂ, ಅದನ್ನು ಪಾಲಿಸದೆ ಆಡಳಿತಾತ್ಮಕ ಕೆಲಸಗಳು ಕುಂಠಿತವಾಗಲು ಅಧಿಕಾರಿಗಳೇ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಭಾರ ಭತ್ಯೆ ಪಾವತಿಯಲ್ಲಿಯೂ ಅಕ್ರಮ ನಡೆದಿರುವ ಆರೋಪವಿದ್ದು, ತಪ್ಪಿತಸ್ಥ ಅಧಿಕಾರಿಗಳಿಂದ ಹಣವನ್ನು ವಸೂಲಿ ಮಾಡಿ ಸರ್ಕಾರಿ ಖಜಾನೆಗೆ ಮರುಪಾವತಿಸಬೇಕು. ಹಲವು ಗ್ರಾಮ ಪಂಚಾಯಿತಿಗಳ ಬಜೆಟ್ನಲ್ಲಿ ನಮೂದಿಸಿರುವ ಅನುದಾನ ಮತ್ತು ವಾಸ್ತವವಾಗಿ ನಡೆದಿರುವ ಕಾಮಗಾರಿಗಳ ನಡುವೆ ವ್ಯತ್ಯಾಸವಿದೆ. ಲೆಕ್ಕಪರಿಶೋಧನಾ ವರದಿಯ ಒಳಪುಟಗಳಲ್ಲಿ ಲೋಪಗಳನ್ನು ಉಲ್ಲೇಖಿಸಿದ್ದರೂ, ಮುಖಪುಟದಲ್ಲಿ ಎಲ್ಲವೂ ಸರಿಯಿದೆ ಎಂದು ನಮೂದಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ದೂರುಗಳ ಬಗ್ಗೆ ಅಧಿಕಾರಿಗಳ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದು ವಾರದೊಳಗೆ ಈ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೂಡಿಗೆರೆ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರ ಅಣಕು ಶವಯಾತ್ರೆ ನಡೆಸಿ, ಮೆರವಣಿಗೆಯ ಮೂಲಕ ತಾಲ್ಲೂಕು ಪಂಚಾಯಿತಿ ಕಚೇರಿಗೆ ಕೊಂಡೊಯ್ದು ಅಣಕು ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಲಾವುದ್ದೀನ್ ಎಚ್ಚರಿಕೆ ನೀಡಿದ್ದಾರೆ.
