ಬಾಳೆಹೊನ್ನೂರು: ಭಾರತದಲ್ಲಿ ಅಂಚೆ ಇಲಾಖೆಯು ನಂಬಿಕೆ ಮತ್ತು ವಿಶ್ವಾಸದ ಪ್ರತಿರೂಪವಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸರ್ಕಾರದ ಸೌಲಭ್ಯಗಳನ್ನು ಎಂಥದೇ ಸಂದರ್ಭದಲ್ಲಿಯೂ ತಲುಪಿಸುವ ದಣಿವರಿಯದ ಮತ್ತು ನಿರಂತರ ಸೇವೆಗೆ ಅಂಚೆ ಇಲಾಖೆ ಮುಂಚೂಣಿಯಲ್ಲಿದ್ದು ಇತರೆ ಇಲಾಖೆಗಳಿಗೆ ಮತ್ತು ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಬಾಳೆಹೊನ್ನೂರು ಇದರ ಅಧ್ಯಕ್ಷರಾದ ಶ್ರೀ ಕೆ ಎಸ್ ಚನ್ನಗಿರಿ ಹೇಳಿದರು.

ಅವರು ಇಲ್ಲಿನ ಅಂಚೆ ಕಚೇರಿ ಆವರಣದಲ್ಲಿ ಭಾರತೀಯ ಅಂಚೆ ಇಲಾಖೆ ಚಿಕ್ಕಮಗಳೂರು ವಿಭಾಗ ಮತ್ತು ಮಲೆನಾಡು ಒಳ್ಳೆ ಮನಸ್ಸುಗಳ ಒಕ್ಕೂಟ ಬಾಳೆಹೊನ್ನೂರು ಏರ್ಪಡಿಸಿದ್ದ” ಅಂಚೆ ಜನ ಸಂಪರ್ಕ ಅಭಿಯಾನ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ” ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಆಧಾರ್ ಪ್ರತಿಯೊಂದು ವ್ಯವಹಾರಕ್ಕೆ ಅತ್ಯವಶ್ಯಕವಾಗಿದ್ದು ಆಧಾರ್ ಕಾರ್ಡ್ ನಲ್ಲಿರುವ ಸಣ್ಣ ಪುಟ್ಟ ತಪ್ಪುಗಳು ಸಹ ಜನರಿಗೆ ಕೆಲವೊಮ್ಮೆ ಸರ್ಕಾರಿ ಸೌಲಭ್ಯ ಪಡೆಯಲು ಅಡ್ಡಿಯಾಗುತ್ತವೆ. ಆ ಕಾರಣದಿಂದ ಸಾರ್ವಜನಿಕರು ನಿಗದಿತ ಸಮಯದಲ್ಲಿ ಆಧಾರ್ ಪರಿಷ್ಕರಣಿ ಮತ್ತು ಅಪ್ಡೇಟ್ ಮಾಡಿಕೊಳ್ಳುವದು ಅತ್ಯಂತ ಅವಶ್ಯವಾಗಿದೆ ಎಂದರು.
ಬಾಳೆಹೊನ್ನೂರು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ರಾಘವೇಂದ್ರ ಮಾತನಾಡಿ ಆಧಾರ್ ಲಿಂಕ್ ಮಾಡುವುದು ಮತ್ತು ಅದರ ಪರಿಷ್ಕರಣೆ ಮತ್ತು ಅಪ್ಡೇಟ್ನಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ನ ರಾ ಪುರ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಎಮ್ ರಾಘವೇಂದ್ರ ಮಾತನಾಡಿ ಅಂಚೆ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಶಿಕ್ಷಣ ಸಂಬಂಧಿತ ಉಳಿತಾಯ ಯೋಜನೆಗಳನ್ನು ಪೋಷಕರು ತಮ್ಮ ಮಕ್ಕಳ ಹೆಸರಲ್ಲಿ ಮಾಡಿಸುವ ಮೂಲಕ ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮಲೆನಾಡು ಒಳ್ಳೆ ಮನಸ್ಸುಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಚೈತನ್ಯ ವೆಂಕಿ ಮಾತನಾಡಿ ಎಲ್ಲಾ ನಾಗರಿಕರು ಈ ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಆಧಾರ್ ನ್ನು ಸುರಕ್ಷಿತ ಮತ್ತು ನವಿಕೃತಗೊಳಿಸಿಕೊಳ್ಳಬೇಕಾಗಿ ಕೋರಿದರು.
ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಅಧ್ಯಕ್ಷ ಸನತ್ ಶೆಟ್ಟಿ ಮಾತನಾಡಿ ಅಂಚೆ ಕಚೇರಿಯಲ್ಲಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳುವುದು ಅತ್ಯಂತ ಸೂಕ್ತ ಮತ್ತು ಸುರಕ್ಷಿತವಾಗಿದ್ದು ಸರ್ವರ್ ಸಮಸ್ಯೆಯ ಗೊಂದಲವಿಲ್ಲದೆ ಶೀಘ್ರವಾಗಿ ಪರಿಷ್ಕರಣೆ ಮಾಡಿಕೊಳ್ಳಬಹುದು ಎಂದರು.
ಮಲೆನಾಡು ಒಳ್ಳೆ ಮನಸ್ಸುಗಳ ಒಕ್ಕೂಟದ ಗೌರವ ಅಧ್ಯಕ್ಷ ಶ್ರೀ ಬಿ ಎಸ್ ಶ್ರೀನಿವಾಸ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೇಸಿ ವಲಯ ಅಧಿಕಾರಿ ಇಬ್ರಾಹಿಂ ಶಾಫಿ, ಹೋಬಳಿ ಜಾನಪದ ಪರಿಷತ್ ಅಧ್ಯಕ್ಷ ಸತೀಶ್ ಅರಳಿಕೊಪ್ಪ, ಹಿರಿಯ ಕ್ರೀಡಾಪಟು ಸ್ಟೀಫನ್ ಓ ಡಿ, ಮಲೆನಾಡು ಒಳ್ಳೆ ಮನಸ್ಸುಗಳ ಒಕ್ಕೂಟದ ಸಂಚಾಲಕ ರೋಹಿತ್ ವಿ, ಆಧಾರ್ ತಿದ್ದುಪಡಿ ಸಿಸ್ಟಮ್ ನಿರ್ವಾಹಕ ವಾಸುದೇವ್ , ಅಂಚೆ ಇಲಾಖೆಯ ಪ್ರಭಾಕರ್, ಶ್ರೀಮತಿ ಗೀತಾ ,ರಫೀಕ್, ಕುಮಾರಿ ಅಶ್ವಿತಾ ಸೇರಿದಂತೆ ಬಿಪಿಎಂಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
