ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ನ ಅಲೆಖಾನ್ ರಾಷ್ಟ್ರೀಯ ಹೆದ್ದಾರಿ ಸಮೀಪ ಹಣ ಹಾಗೂ ಪ್ರಮುಖ ದಾಖಲೆಗಳಿದ್ದ ಪರ್ಸ್ವೊಂದು ಸಿಕ್ಕಿದ್ದು, ಅದನ್ನು ವಾರಸುದಾರರಿಗೆ ಸುರಕ್ಷಿತವಾಗಿ ಹಿಂತಿರುಗಿಸಲು ಮುಂದಾಗಿರುವ ಅಲೆಕಾನ್ ಗ್ರಾಮದ ಪವಿತ್ರ (ಆಶಾ ಕಾರ್ಯಕರ್ತೆ) ಅವರ ಪ್ರಾಮಾಣಿಕತೆ ಹಾಗೂ ಮಾನವೀಯ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತರೀಕೆರೆ ಮೂಲದ ಜಗದೀಶ್ ಅವರು ತಮ್ಮ ಮಗುವಿನ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಮಂಗಳೂರಿನ ಏನೆಪೋಯ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ತೋರಿಸಿ, ಮಗುವನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ತರೀಕೆರೆಯಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಮೂಡಿಗೆರೆ ಕಡೆಗೆ ಬರುತ್ತಿದ್ದರು. ಆಗಸ್ಟ್ 20ರಂದು ಬೆಳಿಗ್ಗೆ ಸುಮಾರು 9 ಗಂಟೆ ವೇಳೆಗೆ ಚಾರ್ಮಾಡಿ ಘಾಟ್ನ ಅಲೆಖಾನ್ ರಾಷ್ಟ್ರೀಯ ಹೆದ್ದಾರಿ ಸಮೀಪ ಪರ್ಸ್ ಕಳೆದುಕೊಂಡಿದ್ದರು.
ಪರ್ಸ್ನಲ್ಲಿ ಸುಮಾರು ₹30 ಸಾವಿರ ನಗದು ಹಾಗೂ ಕೆಲವು ಪ್ರಮುಖ ದಾಖಲೆಗಳು ಇದ್ದವು ಎನ್ನಲಾಗಿದೆ.
ಇದೇ ವೇಳೆ ಅಲೆಖಾನ್ ರಾಷ್ಟ್ರೀಯ ಹೆದ್ದಾರಿ ಸಮೀಪ ಪರ್ಸ್ವೊಂದು ಸಿಕ್ಕಿದ್ದನ್ನು ಗಮನಿಸಿದ ಅಲೆಕಾನ್ ಗ್ರಾಮದ ಆಶಾ ಕಾರ್ಯಕರ್ತೆ ಪವಿತ್ರ ಅವರು ಅದನ್ನು ಸುರಕ್ಷಿತವಾಗಿ ತಮ್ಮ ಬಳಿ ಇಟ್ಟುಕೊಂಡು, ವಾರಸುದಾರರನ್ನು ಪತ್ತೆಹಚ್ಚಿ ಹಿಂತಿರುಗಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
ಪರ್ಸ್ ಕಳೆದುಕೊಂಡಿರುವವರು ಅದರಲ್ಲಿರುವ ಹಣ, ದಾಖಲೆಗಳು ಹಾಗೂ ಇತರ ವಿವರಗಳನ್ನು ಸರಿಯಾಗಿ ತಿಳಿಸಿ, ಅದು ತಮ್ಮದೇ ಎಂಬುದನ್ನು ಖಚಿತಪಡಿಸಿಕೊಂಡು ಪಡೆದುಕೊಳ್ಳಬಹುದು ಎಂದು ಪವಿತ್ರ ತಿಳಿಸಿದ್ದಾರೆ.
ಕಷ್ಟದ ಸಂದರ್ಭದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರಳುತ್ತಿದ್ದ ವೇಳೆ ಕಳೆದುಕೊಂಡ ಪರ್ಸ್ ವಾರಸುದಾರರಿಗೆ ಮರಳಿ ದೊರೆಯುವಂತೆ ಮಾಡಲು ಪವಿತ್ರ ಅವರು ಕೈಗೊಂಡಿರುವ ಈ ಪ್ರಯತ್ನ ಮಾನವೀಯತೆಗೆ ಉತ್ತಮ ಮಾದರಿಯಾಗಿದೆ. ಸಿಕ್ಕ ವಸ್ತುವನ್ನು ತಮ್ಮದಾಗಿಸಿಕೊಳ್ಳದೆ, ಅದರ ವಾರಸುದಾರರನ್ನು ಹುಡುಕಿ ಹಿಂತಿರುಗಿಸಲು ಮುಂದಾದ ಅವರ ಪ್ರಾಮಾಣಿಕ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
