ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದ್ದು, 81 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಕನಕ ಎಂಬ ಭಿಕ್ಷುಕಿ ಮಹಿಳೆಯನ್ನು ಕೊಲೆ ಮಾಡಿದ ನಗರದ ರಾಮನಹಳ್ಳಿಯ ಎಸ್.ಆರ್.ಪೂರ್ಣೇಶ್ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. 2024ರ ಮೇ 10 ರಂದು ಬೆಳಗ್ಗಿನ ಜಾವ 2.30ರ ಸುಮಾರಿಗೆ ಇಲ್ಲಿನ ಐ.ಜಿ.ರಸ್ತೆಯ ಗೋಡೆ ಪಕ್ಕದಲ್ಲಿ ಮಲಗಿದ್ದ ಕನಕ ಅವರನ್ನು ಎಚ್ಚರಿಸಿ ತನ್ನ ಕಾಲನ್ನು ಒತ್ತುವಂತೆ ಒತ್ತಾಯಿಸಿದ ಎನ್ನಲಾಗಿದೆ.
ಇದಕ್ಕೆ ಕನಕ ನಿರಾಕರಿಸಿದ್ದರಿಂದ ಕೋಪಗೊಂಡ ಆರೋಪಿ ಪೂರ್ಣೇಶ್ ಸೈಜುಕಲ್ಲನ್ನು ಆಕೆಯ ತಲೆಯ ಮೇಲೆ ಎತ್ತಿಹಾಕಿದ. ಈ ಸಂದರ್ಭದಲ್ಲಿ ಬಿಡಿಸಲು ಹತ್ತಿರ ಬರುವ ಪ್ರಯತ್ನ ಮಾಡಿದವರ ಮೇಲೂ ಕಲ್ಲು ಎತ್ತಿಹಾಕುವ ಬೆದರಿಕೆ ಹಾಕಿದ ಎಂದು ಹೇಳಲಾಗಿದೆ. ಆದರೂ ಆತನನ್ನು ಸ್ಥಳದಿಂದ ಓಡಿಸಿದ ಸ್ಥಳೀಯ ಇಬ್ಬರು, ತಲೆಯ ಭಾಗಕ್ಕೆ ತೀವ್ರ ಗಾಯಗೊಂಡಿದ್ದ ಆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ಪರೀಕ್ಷಿಸಿದ ವೈದ್ಯರು ಆಕೆ ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು.
ಘಟನೆಯ ಹಿನ್ನೆಲೆಯಲ್ಲಿ ನಗರ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆಯನ್ನು ನಡೆಸಿ ವಾದವಿವಾದಗಳನ್ನು ಆಲಿಸಿದ ಬಳಿಕ ಆರೋಪಿಯು ಮಾಡಿರುವ ಅಪರಾಧವು ಸಾಬೀತಾದ ಹಿನ್ನೆಲೆಯಲ್ಲಿ ನಗರದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಿರಣ್ ಕಿಣಿ ಅವರು ಆರೋಪಿಗೆ ಕಲಂ 302 ರಡಿ ಜೀವಾವಧಿ ಶಿಕ್ಷೆ ಹಾಗೂ 81 ಸಾವಿರ ರೂ. ದಂಡ ವಿಧಿಸಿ ಜುಲೈ 1 ರಂದು ತೀರ್ಪು ಪ್ರಕಟಿಸಿದ್ದಾರೆ. ದಂಡದ ಮೊತ್ತವನ್ನು ದೂರುದಾರರಿಗೆ ನೀಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ.
