Monday, July 27, 2026
Homeಕ್ರೈಮ್ಚಿಕ್ಕಮಗಳೂರು:5.50 ಕೋಟಿಯ ಟಿಂಬರ್ ವ್ಯವಹಾರದಲ್ಲಿ ವಂಚನೆ: ಕೊಲೆ ಬೆದರಿಕೆ ಹಾಕಿದ್ದ ತಂದೆ -ಮಗನ ವಿರುದ್ಧ ಕೇಸ್‌...

ಚಿಕ್ಕಮಗಳೂರು:5.50 ಕೋಟಿಯ ಟಿಂಬರ್ ವ್ಯವಹಾರದಲ್ಲಿ ವಂಚನೆ: ಕೊಲೆ ಬೆದರಿಕೆ ಹಾಕಿದ್ದ ತಂದೆ -ಮಗನ ವಿರುದ್ಧ ಕೇಸ್‌ ದಾಖಲು!

Telegram Group
Join Now

ಚಿಕ್ಕಮಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಂಬರ್ ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ವಂಚನೆ, ಜಗಳ ಹಾಗೂ ಕೊಲೆ ಬೆದರಿಕೆ ಪ್ರಕರಣವೊಂದು ಆಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಗೋಣಿಕೊಪ್ಪ ನಿವಾಸಿ, ಟಿಂಬರ್ ವ್ಯಾಪಾರಿ ಜುಬೇರ್ ಎಂಬುವರು ನೀಡಿದ ದೂರಿನನ್ವಯ ಆಲ್ಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜುಬೇರ್, ಶಂಶುದ್ದೀನ್ ಮತ್ತು ರಾಜೇಶ್ ಎಂಬುವರು ಸೇರಿ ಚಿಕ್ಕಮಗಳೂರು ಜಿಲ್ಲೆಯ ಭೂತನಕಾಡು ಗ್ರಾಮದ ಚಾಮುಂಡಿ ಪ್ಲಾಂಟೇಷನ್ ಎಸ್ಟೇಟ್‌ನ ಕಾಫಿ ತೋಟದಲ್ಲಿ 5.50 ಕೋಟಿ ರೂಪಾಯಿ ಮೌಲ್ಯದ ಸಿಲ್ವರ್ ಮರಗಳನ್ನು ಖರೀದಿಸಲು ನಿರೂಪ್ ಮತ್ತು ಅವರ ತಂದೆ ರತ್ನಾಕರ್ ಎಂಬುವರ ಜೊತೆ ಒಪ್ಪಂದ ಮಾಡಿಕೊಂಡಿದ್ದರು.

ಮುಂಗಡವಾಗಿ 50 ಲಕ್ಷ ರೂಪಾಯಿ ನೀಡಲು ಒಪ್ಪಿ, ಶಂಶುದ್ದೀನ್ ಅವರ ಬ್ಯಾಂಕ್ ಖಾತೆಯಿಂದ ನಿರೂಪ್ ಖಾತೆಗೆ 35 ಲಕ್ಷ ರೂಪಾಯಿ ಜಮೆ ಮಾಡಲಾಗಿತ್ತು ಹಾಗೂ 15 ಲಕ್ಷ ರೂಪಾಯಿಗಳನ್ನು ನಗದಾಗಿ ನೀಡಲಾಗಿತ್ತು. ಆದರೆ, ದಿನ ಕಳೆಯುತ್ತಿದ್ದಂತೆ ಉಭಯ ಪಾರ್ಟಿಗಳ ನಡುವೆ ವ್ಯವಹಾರ ಸರಿಯಾಗಿ ಕುದುರದ ಕಾರಣ ಜುಬೇರ್ ತಂಡವು ತಮ್ಮ ಮುಂಗಡ ಹಣವನ್ನು ವಾಪಸ್ ಕೇಳಿದೆ. ಈ ವೇಳೆ ನಿರೂಪ್ ತಂಡವು ಬ್ಯಾಂಕ್ ಖಾತೆಯ ಮೂಲಕ 35 ಲಕ್ಷ ರೂಪಾಯಿಗಳನ್ನು ಕಂತುಗಳ ರೂಪದಲ್ಲಿ ಹಿಂದಿರುಗಿಸಿದೆ. ಆದರೆ ಬಾಕಿ ಉಳಿದ 15 ಲಕ್ಷ ರೂಪಾಯಿಗಳನ್ನು ನೀಡದೆ ಸತಾಯಿಸಲು ಆರಂಭಿಸಿದೆ ಎನ್ನಲಾಗಿದೆ.

ಹಣ ವಾಪಸ್ ಪಡೆಯಲು ಜುಬೇರ್, ಶಂಶುದ್ದೀನ್ ಮತ್ತು ಶಿಯಾಬ್ ಭೂತನಕಾಡಿನಲ್ಲಿರುವ ನಿರೂಪ್ ನಿವಾಸಕ್ಕೆ ತೆರಳಿದ್ದಾರೆ. ಮೇ 14ರ ರಾತ್ರಿ ಹಣದ ವಿಚಾರವಾಗಿ ಮಾತುಕತೆ ನಡೆಸುತ್ತಿದ್ದಾಗ ನಿರೂಪ್ ಹಾಗೂ ರತ್ನಾಕರ್ ಅಶ್ಲೀಲ ಪದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ್ದಲ್ಲದೆ, ಭಜರಂಗದಳದ ಹೆಸರೇಳಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ, ಜುಬೇರ್ ಅವರ ಕೈಯಲ್ಲಿದ್ದ ಸುಮಾರು 1.50 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಅನ್ನು ಒಡೆದು ಹಾಕಿ, ಇಬ್ಬರು ಹುಡುಗರು ಮತ್ತು ಕೆಲಸದವರೊಂದಿಗೆ ಸೇರಿ ಹಲ್ಲೆ ನಡೆಸಿ ಗೇಟಿನಿಂದ ಹೊರಗೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.

ಇದಾದ ಬಳಿಕವೂ ಮೇ 16ರಂದು ಹಣ ಕೇಳಲು ಹೋದಾಗ ರತ್ನಾಕರ್ ಮತ್ತು ನಿರೂಪ್ ಇಬ್ಬರು ಗೂಂಡಾಗಳನ್ನು ಕರೆದುಕೊಂಡು ಬಂದು ಜುಬೇರ್, ಶಂಶುದ್ದೀನ್ ಹಾಗೂ ಶಿಯಾಬ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.

ಗಲಾಟೆ ಬಿಡಿಸಲು ಬಂದ ಅಸ್ಲರ್ ಮತ್ತು ಅವರ ಸ್ನೇಹಿತರಿಗೂ ಬೈದು ಗಲಾಟೆ ಮಾಡಲಾಗಿದೆ. ತದನಂತರ ಕಾರಿನಲ್ಲಿ ಊರಿಗೆ ಹೊರಟಾಗ ಗೇಟಿನ ಮುಂಭಾಗ ಅಡ್ಡಗಟ್ಟಿ, ಇನ್ನೊಮ್ಮೆ ಹಣ ಕೇಳಿ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಣ ಸಿಗುವ ಭರವಸೆಯಿಂದ ಅಲ್ಲಿಯೇ ಕಾಯ್ದು, ನ್ಯಾಯ ಸಿಗದ ಹಿನ್ನೆಲೆಯಲ್ಲಿ ಜುಬೇರ್ ಆಲ್ಲೂರು ಪೊಲೀಸ್ ಠಾಣೆಗೆ ತಡವಾಗಿ ಬಂದು ದೂರು ನೀಡಿದ್ದಾರೆ. ಸದ್ಯ ಪೊಲೀಸರು ರತ್ನಾಕರ್, ನಿರೂಪ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments