ಚಿಕ್ಕಮಗಳೂರು: ಮಧ್ಯರಾತ್ರಿ ಯುವಕರ ಗುಂಪೊಂದು ನಡುರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡಿರುವ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಈ ಹೈಡ್ರಾಮಾ ನಡೆದಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಯುವಕರು ಪರಸ್ಪರ ಬಡಿದಾಡಿಕೊಂಡಿದ್ದಾರೆ.
ರಸ್ತೆಯ ಮಧ್ಯದಲ್ಲೇ ಬೈಕ್ ನಿಲ್ಲಿಸಿ ಗಲಾಟೆ ಆರಂಭಿಸಿದ ಯುವಕರ ಗುಂಪು ತೀವ್ರ ಆಕ್ರೋಶದಿಂದ ಒಬ್ಬರ ಮೇಲೊಬ್ಬರು ಮುಗಿಬಿದ್ದಿದ್ದಾರೆ. ಈ ಮಾರಮಾರಿಯ ವೇಳೆ ಒಬ್ಬ ಯುವಕನನ್ನು ನೆಲಕ್ಕೆ ತಳ್ಳಿ, ಆತ ಕೆಳಗೆ ಬಿದ್ದಿದ್ದರೂ ಸಹ ರೇಗಿದ ಯುವಕರ ಗುಂಪು ಆತನ ಮುಖ ಹಾಗೂ ಮೈಮೇಲೆ ಕಾಲಿನಿಂದ ಅಮಾನವೀಯವಾಗಿ ತುಳಿದು ವಿಕೃತಿ ಮೆರೆದಿದೆ.
ಈ ದೃಶ್ಯ ನೋಡುಗರಲ್ಲಿ ತೀವ್ರ ನಡುಕ ಹುಟ್ಟಿಸುವಂತಿದ್ದ ಈ ಇಡೀ ಭೀಕರ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಕಾಫಿನಾಡಿನ ಮುಖ್ಯ ರಸ್ತೆಯಲ್ಲೇ ನಡೆದ ಈ ಜಗಳಕ್ಕೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲವಾದರೂ, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
