Thursday, April 23, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಕಾಫಿಗೆ ವಕ್ಕರಿಸಿದ ರೆಂಬೆ ಕೊರಕಲು ರೋಗ: ಬೆಳೆಗಾರರಲ್ಲಿ ಹೆಚ್ಚಿದ ಆತಂಕ!

ಚಿಕ್ಕಮಗಳೂರು: ಕಾಫಿಗೆ ವಕ್ಕರಿಸಿದ ರೆಂಬೆ ಕೊರಕಲು ರೋಗ: ಬೆಳೆಗಾರರಲ್ಲಿ ಹೆಚ್ಚಿದ ಆತಂಕ!

ಚಿಕ್ಕಮಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಧಾರಣೆಯೇನೋ ಇದೆ. ಆದರೆ, ಜಿಲ್ಲೆಯಲ್ಲಿ ಕಾಫಿಗೆ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಬೆಳೆಗಾರರು ಉತ್ತಮ ಇಳುವರಿ ಪಡೆಯುವುದಿರಲಿ, ಬೆಳೆ ಉಳಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ಇದೀಗ ಕಾಫಿಗೆ ರೆಂಬೆ ಕೊರಕದ ಹಾವಳಿ ಹೆಚ್ಚಾಗಿದ್ದು, ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.

ಇದುವರೆಗೆ ಕಾಂಡ ಕೊರಕ ಅರೇಬಿಕಾ ಕಾಫಿಯಲ್ಲಿ ಸರ್ವೇ ಸಾಮಾನ್ಯ ಎನ್ನುವಂತಾಗಿತ್ತು. ಕಾಫಿ ಮಂಡಳಿ ಕಾಂಡ ಕೊರಕದ ಬಗ್ಗೆ ಸಂಶೋಧನೆ ನಡೆಸಿ ಔಷಧ ಕಂಡುಹಿಡಿದ ಬಳಿಕ ಬೆಳೆಗಾರರು ಈ ಬಾಧೆಯಿಂದ ಕಾಫಿ ತೋಟಗಳನ್ನು ಉಳಿಸಿಕೊಂಡರೂ ಅಷ್ಟರಮಟ್ಟಿಗೆ ಔಷಧಿ ಯಶಸ್ವಿಯಾಗಿಲ್ಲ.

ಕಾಫಿ ತೋಟಗಳ ಅಲ್ಲಲ್ಲಿ ಕಾಣಿಸಿಕೊಂಡಿರುವ ರೆಂಬೆ ಕೊರಕದ ಬಾಧೆ ಹೆಚ್ಚಾದಲ್ಲಿ ಇಳುವರಿ ಗಣನೀಯವಾಗಿ ಕುಂಠಿತಗೊಂಡು ಬೆಳೆಗಾರರು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಪ್ರಮುಖವಾಗಿ, ಕಾಫಿ ಫಸಲು ಬರುವ ರೆಂಬೆಗಳೇ ರೆಂಬೆ ಕೊರಕದ ಬಾಧೆಗೆ ತುತ್ತಾಗುತ್ತಿವೆ. ರೋಗ ಬಾಧಿತ ರೆಂಬೆಗಳಲ್ಲಿ ಕಾಫಿ ಫಸಲು ಬರುವುದಿಲ್ಲ. ಒಂದು ವೇಳೆ ರೋಗ ಹೆಚ್ಚಾದಲ್ಲಿ ಗಿಡವೇ ನಾಶವಾಗುವ ಅಪಾಯವೂ ಇದೆ. ಇದೇ ಕಾರಣದಿಂದಲೇ ಬೆಳೆಗಾರರು ಕಾಫಿ ಇಳುವರಿ ಪಡೆಯುವುದಿರಲಿ, ಗಿಡಗಳನ್ನು ಉಳಿಸಿಕೊಳ್ಳಲೂ ಪರದಾಡಬೇಕಾದ ಸ್ಥಿತಿ ಎದುರಾಗಿದೆ.

ಬೆಳೆಗಾರರು ಬಿರು ಬಿಸಿಲಿನ ಬೇಗೆಯಿಂದಾಗಿ ಅಥವಾ ಮರಗಸಿ ಮಾಡುವ ವೇಳೆ ಮರದ ರೆಂಬೆಗಳು ಬಿದ್ದಿದ್ದರಿಂದಲೂ ಕಾಫಿ ಗಿಡಗಳ ರೆಂಬೆಗಳು ಒಣಗಿರಬಹುದೆಂದು ಭಾವಿಸಿದ್ದರು. ಆದರೆ ಮಳೆ ಬಂದರೂ ಒಣಗಿದ ರೆಂಬೆಗಳು ಹಸಿರಾಗದೇ ಇದ್ದಾಗ ಬೆಳೆಗಾರರು ಗಿಡಗಳ ಪರಿಶೀಲನೆ ನಡೆಸಿದಾಗ ರೆಂಬೆ ಕೊರಕದ ಹಾವಳಿ ಬೆಳಕಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!