ಚಿಕ್ಕಮಗಳೂರು: ಕೇರಳದ ಬಾಲಕಿಯ ಅಸಹಜ ಸಾವು ಘಟನೆಯ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ದತ್ತಪೀಠ, ಮಾಣಿಕ್ಯಾಧಾರ ತಪ್ಪಲು ಪ್ರದೇಶದಲ್ಲಿ ಪಿಎಸ್ಐ ನೇತೃತ್ವದಲ್ಲಿ ನಾಲ್ವರು ಪೊಲೀಸರನ್ನು ಶಾಶ್ವತವಾಗಿ ನಿಯೋಜಿಸಲಾಗಿದೆ. ಜೊತೆಗೆ ಚಿಕ್ಕಮಗಳೂರು ವಿಭಾಗದ 15 ಪೊಲೀಸ್ ಠಾಣೆಗಳ ಪಿಎಸ್ಐಗಳು ಪರ್ಯಾಯವಾಗಿ ಪ್ರತಿದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಠಾಣೆಯಿಂದ ಕೆಲ ಸಿಬ್ಬಂದಿಯನ್ನು ವಾರಪೂರ್ತಿ ಅಲ್ಲಿಯೇ ಮೊಕ್ಕಾಂ ಹಾಕುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ 24 ಗಂಟೆಗಳ ಭದ್ರತೆ ಒದಗಿಸಲಾಗುತ್ತಿದೆ.
ಬೇಸಿಗೆ ರಜೆ, ವೀಕೆಂಡ್ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಮಾಣಿಕ್ಯಾಧಾರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದೆ.
ಚಂದ್ರದ್ರೋಣ ಪರ್ವತಶ್ರೇಣಿ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಲಾಗಿದೆ. ಕಂದಕಗಳು, ಜಲಪಾತಗಳು ಮತ್ತು ಎತ್ತರದ ಪರ್ವತ ಪ್ರದೇಶಗಳಲ್ಲಿ ಪ್ರವಾಸಿಗರು ನಿರ್ಲಕ್ಷ್ಯ ತೋರಬಾರದು ಎಂಬ ಉದ್ದೇಶದಿಂದ ಪೊಲೀಸರ ತಂಡಗಳು ಹದ್ದಿನ ಕಣ್ಣಿಟ್ಟಿದೆ
