ಚಿಕ್ಕಮಗಳೂರು: ಮಲೆನಾಡಿನ ಮಡಿಲು, ತಂಪಾದ ಹವಾಮಾನಕ್ಕೆ ಹೆಸರಾದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ಬಾರಿ ಸೂರ್ಯನ ಪ್ರಖರತೆ ಮಿತಿ ಮೀರಿದ್ದು, ಜನತೆ ಬಿಸಿಲಿನ ಬೇಗೆಯಿಂದ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ಸಾಮಾನ್ಯವಾಗಿ ವರ್ಷಪೂರ್ತಿ ಹಿತಕರವಾದ ವಾತಾವರಣ ಹೊಂದಿರುವ ಈ ನಗರದಲ್ಲಿ ಈಗ ತಾಪಮಾನವು ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಮಲೆನಾಡಿಗರಿಗೆ ಸುಡುವ ಬಿಸಿಲು ಹೊಸ ಅನುಭವದೊಂದಿಗೆ ಆತಂಕವನ್ನೂ ತಂದೊಡ್ಡಿದೆ. ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆಯೇ ಸೂರ್ಯ ತನ್ನ ಪ್ರತಾಪ ತೋರಿಸಲು ಆರಂಭಿಸುತ್ತಿದ್ದು, ಮಧ್ಯಾಹ್ನದ ವೇಳೆಗೆ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ಈ ಬಾರಿಯ ವಿಪರೀತ ಸೆಕೆಗೆ ಮಾರ್ಚ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯೂ ಪ್ರಮುಖ ಕಾರಣವಾಗಿದೆ. ಮಾರ್ಚ್ ಮಾಸದಲ್ಲಿ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಈಗ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ತಗುಲಿದಾಗ ಹಬೆಯಂತಹ ವಾತಾವರಣ ನಿರ್ಮಾಣವಾಗುತ್ತಿದೆ.
ಈ ಅತಿಯಾದ ಆದ್ರ್ರತೆಯಿಂದಾಗಿ ಜನರು ಸಾಮಾನ್ಯಕ್ಕಿಂತ ಹೆಚ್ಚಿನ ಬೆವರುವಿಕೆ ಮತ್ತು ಸೆಕೆಯನ್ನು ಅನುಭವಿಸುವಂತಾಗಿದೆ. ಮಳೆ ಸುರಿದು ಭೂಮಿ ತಂಪಾಗುವ ಬದಲಿಗೆ, ತೇವಾಂಶದ ಕಾರಣದಿಂದಾಗಿ ವಾತಾವರಣವು ಪ್ರೆಶರ್ ಕುಕ್ಕರ್‌ನಂತಾಗಿರುವುದು ಸಾರ್ವಜನಿಕರು ಹೈರಾಣಾಗಲು ಮುಖ್ಯ ಕಾರಣವಾಗಿದೆ.
ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಖದ ಹೊಡೆತದಿಂದ ಪಾರಾಗಲು ಸಾರ್ವಜನಿಕರು ಈಗ ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ.
